ಬಳ್ಳಾರಿ: ಸಿಎಂ ಬಿಎಸ್ವೈಗೆ ವಯಸ್ಸಾಗಿದೆ ಅನ್ನೋ ಅನಾಮಧೇಯ ಪತ್ರ ಅನಾಮಧೇಯವೇ. ಅದಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವ ಮೂಲಕ ಡಿಸಿಎಂ ಅಶ್ವಥ್ ನಾರಾಯಣ ಈ ವಿಚಾರವನ್ನು ತಳ್ಳಿಹಾಕಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿಂದು ಗ್ರಂಥಾಲಯ ಕಟ್ಟಡಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸೂಪರ್ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲವೂ ರೂಮರ್ ಅಷ್ಟೇ. ಇವೆಲ್ಲಾ ಪಕ್ಷ ವಿರೋಧಿಗಳು ಮಾಡುತ್ತಿರುವ ಹುನ್ನಾರ. ಪರ್ಯಾಯ ನಾಯಕತ್ವದ ಹೆಸರಿನಡಿ ಸೂಪರ್ ಸಿಎಂ ಮುನ್ನಲೆಗೆ ಬಂದಿದೆ. ಅದೆಲ್ಲ ಸುಳ್ಳು. ಬಿಎಸ್ವೈ ಆಡಳಿತ ನಡೆಸಲು ಸಮರ್ಥರಿದ್ದಾರೆ. ಪಕ್ಷದ ಎಲ್ಲಾ ಆಗು- ಹೋಗುಗಳನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಅಂತಹದ್ದರಲ್ಲಿ ಸೂಪರ್ ಸಿಎಂ ಪ್ರಸ್ತಾವೇ ಇಲ್ಲಿ ಬರಲ್ಲ ಎಂದು ಸ್ಪಷ್ಟಪಡಿಸಿದ್ರು.
ಪೌರತ್ವ ಕಾಯಿದೆ ವಿರೋಧಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ವಿಚಾರ ವಿನಿಮಯ ಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಂಡು ಈ ರೀತಿಯ ದೇಶದ್ರೋಹ ಕೆಲಸಕ್ಕೆ ಮುಂದಾಗಬಾರದು. ಸರ್ಕಾರಿ ಕಾಲೇಜುಗಳ ಕ್ಯಾಂಪಸ್ ನಲ್ಲಿ ಪೌರತ್ವ ಕಾಯಿದೆ ವಿರೋಧಿಸಿ ಪ್ರತಿಭಟನೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳೋದು ಸರಿಯಲ್ಲ ಎಂದರು.