ಬಳ್ಳಾರಿ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನೆಲೆಸಿರುವ ಲಿಂಗಾಯತ ಲಾಳಗೊಂಡ ಸಮುದಾಯವು ಆರ್ಥಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಳ್ಳಲಿ ಎಂದು ಬಳಗಾನೂರು ಚಿಕ್ಕೇನಕೊಪ್ಪ ಮಠದ ಶಿವಶಾಂತ ವೀರ ಶರಣರು ಅಭಿಪ್ರಾಯಪಟ್ಟರು.
ನಗರದ ಎಂ.ಆರ್.ವಿ ಲೇಔಟ್ನಲ್ಲಿರುವ ಅಖಿಲ ಕರ್ನಾಟಕ ಲಾಳಗೊಂಡ ಸಂಘದ ಜಿಲ್ಲಾ ಘಟಕದಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ರಷ್ಟು ಅಂಕ ಪಡೆದ ಸುಮಾರು ಎಂಭತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜ್ಞಾನಾಮೃತ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಕೋರ್ಸಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು ಆರ್ಥಿಕ ನೆರವು ನೀಡುವ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶಾಂತ ವೀರ ಶರಣರು ಈ ಸಮುದಾಯದ ಕುಲಕಸುಬು ಜಾನುವಾರು ಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಶೈಕ್ಷಣಿಕವಾಗಿ ಈ ಸಮುದಾಯ ಸುಧಾರಿಸಿಕೊಳ್ಳುತ್ತಿದ್ದು, ಆರ್ಥಿಕವಾಗಿ ಒಂದಿಷ್ಟು ಸಬಲೀಕರಣಗೊಂಡಿದ್ದಾರೆ. ಇಂತಹ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಶ್ರಮಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದರು.