ಬೆಂಗಳೂರು/ಹೊಸಪೇಟೆ: ಬಡ ಮಕ್ಕಳಿಗೆ ವಸ್ತುನಿಷ್ಠ ವಿದ್ಯಾಭ್ಯಾಸ ನೀಡಲು ಆರ್. ಟಿ.ಇ. ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಆಗ್ರಹಿಸಿದರು.
ಬಳ್ಳಾರಿಯ ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆ ಒಕ್ಕೂಟ ಮಂಡಳಿ ಇಂದು ಬೆಂಗಳೂರು ನಗರದ ಅಮೃತ ರೆಸ್ಟೋರೆಂಟ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ತಿದ್ದುಪಡಿಯನ್ನು ವಾಪಸ್ ಪಡಿಯಬೇಕಿದೆ. ಮೈತ್ರಿ ಸರ್ಕಾರ ಕೆಲವು ಖಾಸಗಿ ಶಿಕ್ಷಣದ ಶಾಲೆಗಳ ಲಾಬಿಗೆ ಮಣಿದು ಈ ತಿದ್ದುಪಡಿಯನ್ನು ಜಾರಿಗೆ ತಂದಿತ್ತು. ಇದರಿಂದ 1.50 ಲಕ್ಷ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ.ಕಲಂ 12(1) ಸಿ ಗೆ ಮರುಚಾಲನೆ ನೀಡಬೇಕಿದೆ ಎಂದು ಒತ್ತಾಯಿಸಿದರು.
ಈ ತಿದ್ದುಪಡಿಯನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಲಾಗಿದೆ. ಆದ್ರೆ, ನ್ಯಾಯಾಲಯವು ಈ ವಿಚಾರದ ವಾದ ಪ್ರತಿವಾದವನ್ನು ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ ಎಂದರು.
2012-13 ನೇ ಸಾಲಿನಿಂದ 18-19ನೇ ಸಾಲಿನವರೆಗೂ ರಾಜ್ಯದಲ್ಲಿ 6.50ಲಕ್ಷ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅನುದಾನ ರಹಿತ ಶಾಲೆಗಳಲ್ಲಿ ಪಡೆದಿದ್ದಾರೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಶಿಕ್ಷಣ ನೀತಿಯನ್ನು ಯು.ಪಿ.ಎ. ಸರ್ಕಾರ 2009 ರಲ್ಲಿ ಜಾರಿಗೆ ತಂದಿತ್ತು. ಆರ್.ಟಿ.ಇ ಮುಖ್ಯ ಉದ್ದೇಶ ಎಂದರೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡವುದಾಗಿದೆ ಎಂದು ಯೋಗಾನಂದ ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. 10 ಜಿಲ್ಲೆಗಳಲ್ಲಿ ನಿಯೋಗ ಕರೆದೊಯ್ದು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಈ ಕುರಿತು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.