ಬಳ್ಳಾರಿ : ಮನೆಯಲ್ಲಿ ಪೊಲೀಸ್ ಪೇದೆಯ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದಲ್ಲಿ ನಡೆದಿದೆ. ತೆಕ್ಕಲಕೋಟೆ ಪೊಲೀಸ್ ಪೇದೆ ರಮೇಶ್ ಎಂಬುವವರ ಪತ್ನಿ ರಾಜೇಶ್ವರಿ ಮೃತ ಮಹಿಳೆ. ರಮೇಶ್‌ನೇ ತಮ್ಮ ಮಗಳನ್ನು ಕೊಲೆ ಮಾಡಿರುವುದಾಗಿ ಮೃತ ರಾಜೇಶ್ವರಿ ಪೋಷಕರು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಯುವತಿ ಮನೆಯವರ ವಿರೋಧದ ನಡುವೆಯೂ ರಮೇಶ್ ಮತ್ತು ರಾಜೇಶ್ವರಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದೂವರೇ ವರ್ಷದ ಹೆಣ್ಣು ಮಗು ಇದೆ. ಇಂದು ಬೆಳಗಿನ ಜಾವ ರಾಜೇಶ್ವರಿ ಮೃತಪಟ್ಟಿದ್ದು, ಮೃತದೇಹವನ್ನು ರಮೇಶ್ ನೇರವಾಗಿ ರಾಜೇಶ್ವರಿಯ ಸಿಂಧನೂರಿನ ಮನೆಗೆ ತೆಗೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ.
ಇನ್ನು ರಾಜೇಶ್ವರಿ ಮನೆಯವರು ಸಾವು ಹೇಗೆ ಆಯಿತು ಎಂದು ರಮೇಶ್ನಲ್ಲಿ ಕೇಳಿದ್ದು, ಒಮ್ಮೆ ನೇಣಿಗೆ ಶರಣಾದಳು, ಮತ್ತೊಮ್ಮೆ ಮೂರ್ಛೆರೋಗ ಬಂದಿತ್ತು. ಇನ್ನೊಮ್ಮೆ ಲೋ ಬಿಪಿಯಿಂದ ಮೃತಪಟ್ಟಿದ್ದಾಳೆ ಎಂದು ರಮೇಶ್ ದ್ವಂದ್ವ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ರಾಜೇಶ್ವರಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು ಅತ್ಯಾಚಾರ ಪ್ರಕರಣ: ಯುವತಿ ಸೇರಿ ಮೂವರ ಬಂಧನ