ಬಳ್ಳಾರಿ : ಗಣಿನಗರಿ ಬಳ್ಳಾರಿಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರಿಂದಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘನೆಯಾಗಿದೆ. ಮಹಾನಂದಿ ಬೀದಿಗೆ ಶಾಸಕ ಸೋಮಶೇಖರ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು. ಪರಸ್ಪರ ಅಪ್ಪುಗೆ, ಹಸ್ತ ಲಾಘವ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಲಾಯಿತು.
11ನೇ ವಾರ್ಡಿನ ಮಹಾನಂದಿ ಬೀದಿಯಲ್ಲಿ ಶಾಸಕ ರೆಡ್ಡಿ ಅವರು ಅಕ್ಕಿ ಸೇರಿ ಇನ್ನಿತರೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಮೊದಲೇ ನಿಗದಿಪಡಿಸಲಾಗಿತ್ತು. ಶಾಸಕರು ಬರುವ ಮುನ್ನ ರಸ್ತೆಯಲ್ಲಿ ಗುಂಪು ಗುಂಪಾಗಿ ಕಾರ್ಯಕರ್ತರು ಜಮಾಯಿಸಿದ್ದರು. ಶಾಸಕ ರೆಡ್ಡಿ ಕಾರು ಆಗಮಿಸಿದ ಬಳಿಕವೂ ನೂರಾರು ಕಾರ್ಯಕರ್ತರ ಪಡೆ ಸೇರಿತ್ತು. ಅವರ ಹಿಂದೆ ಹತ್ತಾರು ಕಾರ್ಯಕರ್ತರು ತೆರಳಿದ್ರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೂ ಕೂಡ ಕಾರ್ಯಕರ್ತರು ಮಾತ್ರ ಸಡಿಲಗೊಳ್ಳಲಿಲ್ಲ.
ಶಾಸಕ ಸೋಮಶೇಖರ ರೆಡ್ಡಿ ಮಹಾನಂದಿ ಬೀದಿಯಲ್ಲಿನ ಮನೆಗಳಿಗೆ ತೆರಳಿ ದಿನಸಿ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಶಾಸಕ ರೆಡ್ಡಿ, ಅಂದಾಜು 4 ಸಾವಿರಕ್ಕೂ ಅಧಿಕ ದಿನಸಿ ಕಿಟ್ ವಿತರಿಸಲಾಗುವುದು. ಹದಿನಾಲ್ಕು ದಿನಗಳ ಕಾಲ ಬಡ ಮತ್ತು ಕೂಲಿ ಕಾರ್ಮಿಕರು ಅನುಭವಿಸುವ ಸಂಕಷ್ಟ ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ಆ ಕಿಟ್‌ನಲ್ಲಿ ಅಕ್ಕಿ, ಬೇಳೆ, ಎಣ್ಣೆ ಸೇರಿ ಇನ್ನಿತರೆ ಗೃಹೋಪಯೋಗಿ ಸಾಮಾಗ್ರಿಗಳು ಇರಲಿವೆ ಎಂದರು.