ಬಳ್ಳಾರಿ: ಶಿಕ್ಷಕನೋರ್ವನ ಸಾವಿನಲ್ಲೂ ಗುರುಭಕ್ತಿ ತೋರಿಸಿ ಗಣಿ ಜಿಲ್ಲೆಯ ವಿದ್ಯಾರ್ಥಿಗಳು ಮಾನವೀಯತೆ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಿರುಗುಪ್ಪ ಪಟ್ಟಣದ ವಿನಾಯಕ ನಗರ ನಿವಾಸಿ ನಿವೃತ್ತ ಶಿಕ್ಷಕ ವೈ.ಈಶ್ವರಪ್ಪ (63) ಶನಿವಾರ ಕೋವಿಡ್ಗೆ ಬಲಿಯಾಗಿದ್ದಾರೆ. ಈ ವೇಳೆ, ಹಳೆ ವಿದ್ಯಾರ್ಥಿಗಳು ಪಿಪಿಇ ಕಿಟ್ ಧರಿಸಿ ಶಿಕ್ಷಕನ ಅಂತ್ಯ ಸಂಸ್ಕಾರ ಮಾಡಿ ವಿಶೇಷ ಗಮನ ಸೆಳೆದಿದ್ದಾರೆ.
ಕಳೆದ ವಾರವಷ್ಟೇ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ನಿವೃತ್ತ ಶಿಕ್ಷಕ ಈಶ್ವರಪ್ಪ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ. ಈ ವೇಳೆ ವಿದ್ಯಾರ್ಥಿಗಳೇ ಮೃತದೇಹ ತೆಗೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿದ್ದಾರೆ.
ಮೃತ ಶಿಕ್ಷಕ ವೈ. ಈಶ್ವರಪ್ಪನವರು ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿ ಬಹಳಷ್ಟು ವಿದ್ಯಾರ್ಥಿಗಳ ಪ್ರೀತಿಗೆ ಭಾಜನರಾಗಿದ್ದರು.