ಬಳ್ಳಾರಿ: ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾದನಹಟ್ಟಿ ಗ್ರಾಮದ ಸುರಕ್ಷಿತ(3) ಮತ್ತು ಶಾಂತಕುಮಾರ್ (7) ಮೃತ ಮಕ್ಕಳಾಗಿದ್ದಾರೆ. ಇನ್ನೊಬ್ಬ ಬಾಲಕಿಗೆ ನಾಯಿ ಕಚ್ಚಿದ್ದು, ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ.
ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ನಾಯಿಯೊಂದು ದಾಳಿ ಮಾಡಿ ಸುರಕ್ಷಿತಾಳ ಮುಖಕ್ಕೆ ನಾಯಿ ಕಚ್ಚಿದೆ. ತಡೆಯಲು ಹೋದ ಶಾಂತಕುಮಾರ್ ಕೈ ಕಾಲಿಗೂ ಸಹ ನಾಯಿ ಕಚ್ಚಿದೆ. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ಹಾಗೂ ಶಾಂತಕುಮಾರ್‌ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ಚಿಕಿತ್ಸೆ ಫಲಕಾರಿಯಾಗದೇ ನ.21ರಂದು ಸುರಕ್ಷಿತಾ ಮತ್ತು ನ.22ರಂದು ಶಾಂತಕುಮಾರ್ ಮೃತಪಟ್ಟಿದ್ದಾರೆ.
ನಾಯಿಯನ್ನು ಕೊಂದ ಗ್ರಾಮಸ್ಥರು: ಮಕ್ಕಳ ಮೇಲೆ ದಾಳಿ ಮಾಡಿದ ವೇಳೆ ಅಲ್ಲೇ ಇದ್ದ ಸ್ಥಳೀಯರಿಗೂ ನಾಯಿ ಕಚ್ಚಲು ಮುಂದಾಗಿದ್ದು, ಗ್ರಾಮಸ್ಥರು ಆತಂಕದಿಂದ ಆ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ. ಆತಂಕದಲ್ಲಿರುವ ಗ್ರಾಮಸ್ಥರಿಗೆ ಡಿಎಚ್‌ಒ ಜನಾರ್ದನ ಜಿ.ಪಂ ಅಧಿಕಾರಿಗಳ ತಂಡ ಭೇಟಿ ನೀಡಿ ಜಾಗೃತಿ ಮೂಡಿಸಿದೆ. ನಾಯಿ ಕಡಿತ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ ತಂಡ ಜನರಿಗೆ ತಿಳಿಸಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೀದಿ ನಾಯಿಗಳ ಹಾವಳಿ: ಪುಟ್ಟ ಬಾಲಕಿಗೆ ಕಚ್ಚಿ ಗಾಯ