ಬಳ್ಳಾರಿ: ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇರದಿದ್ದರೆ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿತ್ತು ಎಂದು ಮಹಿಳಾ ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ದೇಶವೇ ಕೋವಿಡ್ ಸೋಂಕಿನ ಭಯದಲ್ಲಿ ನಲುಗಿ ಹೋಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಕೋವಿಡ್ನಿಂದ ಸಾಯುವವರ ಸಂಖ್ಯೆ ಹೆಚ್ಚಾದಂತೆ ನರೇಗಾ ಯೋಜನೆ ಇರದಿದ್ದರೆ ಹಸಿವಿನಿಂದ ಸಾಯುವವರ ಸಂಖ್ಯೆ ಸಹ ಹೆಚ್ಚಾಗುತ್ತಿತ್ತು. ಆ ಯೋಜನೆಯಿಂದಲೇ ಇವತ್ತು ಬಡ ಮತ್ತು ಕೂಲಿ ಕಾರ್ಮಿಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಬಿಚ್ಚಿಟ್ಟರು.
ಆಡಳಿತ ಸರ್ಕಾರ ವಿಫಲ:
ಉದ್ಯೋಗಸ್ಥ ಹಾಗೂ ಮಧ್ಯಮ ಮತ್ತು ಬಡವರ್ಗದ ಮಹಿಳೆಯರು ಈ ಕೋವಿಡ್ನಿಂದ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಒತ್ತಡ ಅನುಭವಿಸುತ್ತಿದ್ದಾರೆ. ಅವರ ಪರವಾಗಿ ಯಾವುದೇ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ. ಪ್ರತಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಕೆಲಸ ಮಾಡುತ್ತಿಲ್ಲ. ಅನ್ಯಾಯ, ಭ್ರಷ್ಟಾಚಾರ ಆಗಿದ್ದನ್ನು ಹೇಳಿದರೆ ಈ ಸರ್ಕಾರ ಪ್ರತಿಪಕ್ಷಗಳ ನಡೆಯನ್ನ ಸಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ಘೋಷಣೆ ಮಾಡಿ:
ಜಿಲ್ಲೆಯ ರೈತರು ಬೆಳೆದ ಈರುಳ್ಳಿ ಬೆಳೆಗೆ ಕೊಳೆ - ಮಜ್ಜಿಗೆ ರೋಗ ಕಾಣಿಸಿಕೊಂಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಬೆಳೆನಷ್ಟ ಉಂಟಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಅನ್ನದಾತನ ಒಳಿತಿಗಾಗಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಪುಷ್ಪಾ ಅಮರನಾಥ ಆಗ್ರಹಿಸಿದರು.