ಹೊಸಪೇಟೆ: ವಾಲ್ಮೀಕಿ ಸಮಾಜದ ಮುಖಂಡ, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹೇಳಿದ್ದಾರೆ.
ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 105 ಬಿಜೆಪಿ ಶಾಸಕರನ್ನು ಗೆಲ್ಲಿಸಿದ ಕೀರ್ತಿ ವಾಲ್ಮೀಕಿ ಸಮಾಜದ ಜನರಿಗೆ ಸಲ್ಲುತ್ತದೆ. ಆದ್ರೆ, ಬಿಜೆಪಿ ವಾಲ್ಮೀಕಿ ಜನಾಂಗದವರನ್ನು ಕಡೆಗಣಿಸುತ್ತಿದೆ. ಸಚಿವ ಸಂಪುಟ ಪ್ರಾರಂಭದಿಂದಲೂ ಸಚಿವ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೆ ಎಂಬ ನಂಬಿಕೆ ನಮ್ಮ ಸಮಾಜದವರಲ್ಲಿತ್ತು. ಆದರೆ ಇದನ್ನು ಸರ್ಕಾರ ಹುಸಿಗೊಳಿಸಿದೆ. ರಾಜ್ಯದ ವಾಲ್ಮೀಕಿ ಸಮಾಜದ ಜನರು ಪಕ್ಷಬೇಧ ಮೆರತು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ ಎಂದರು.
ವಾಲ್ಮೀಕಿ ಸಮಾಜದ ರಾಜಹಳ್ಳಿ ಗುರುಪೀಠದ ಪೀಠಾಧಿಪತಿ ವಾಲ್ಮೀಕಿ ಪ್ರಸಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಶ್ರೀರಾಮುಲು ಹಾಗೂ ರಮೇಶ ಜಾರಕಿಹೊಳಿ ಉಪ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರ ಜೊತೆಗೆ ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿಯನ್ನು ಶೀಘ್ರದಲ್ಲಿ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.