ಬಳ್ಳಾರಿ: ಚುನಾವಣೆ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ ಅವರು, ಫೆ.23 ರಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಸಂಡೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಡೂರು ತಾಲೂಕಿನ ತೋರಣಗಲ್ಲು ಪಟ್ಟಣದಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರಮುಖರ ಜೊತೆ ಗೃಹ ಸಚಿವರು ಸಭೆ ನಡೆಸಲಿದ್ದಾರೆ ಎಂದರು.
ಸಂಡೂರಿನಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ನಮ್ಮ ಸರ್ಕಾರದ ಅನೇಕ ಸಚಿವರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರದಲ್ಲಿ ಸ್ಪರ್ಧೆ: ಇನ್ನು ಮುಂಬರುವ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲೇ ಸ್ಪರ್ಧೆ ಮಾಡುವೆ, ಇದು ಖಚಿತ. ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನದಾಗಿದೆ. ಎಲ್ಲದಕ್ಕೂ ವರಿಷ್ಠರ ತೀರ್ಮಾನವೇ ಅಂತಿಮ, ಈ ಹಿಂದೆ ಸಂಸದರಾಗಿದ್ದಾಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವರಿಷ್ಠರು ಹೊರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರಾದರು. ನಾನು ಅಲ್ಲಿ ಹೋಗಿ ಸ್ಪರ್ಧೆ ಮಾಡಿದ್ದ ಕಾರಣ ಅಲ್ಲಿ ಐದು ಜನ ಗೆದ್ದರು ಎಂದರು.
ಇನ್ನು ಬಾಗಲಕೋಟೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಾದಾಮಿ, ಜಮಖಂಡಿ ಬಿಟ್ಟು ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಅಲ್ಲಿಗೆ ಹೋಗುವುದರಿಂದ ಲಾಭ ಆಗುತ್ತದೆ ಎಂದು ನನನ್ನು ಅಲ್ಲಿಗೆ ಕರೆಸಿದ್ದರು. ನಾನು ಇಚ್ಛೆಪಟ್ಟು ಹೋಗಿಲ್ಲ, ಈಗ ನಾನು ಬಳ್ಳಾರಿ ಜಿಲ್ಲೆಯಲ್ಲಿ ನಿಲ್ಲಬೇಕು ಎಂದು ಇಚ್ಛೆಪಟ್ಟಿದ್ದೇನೆ. ಪಕ್ಷದ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಾದೇಶಿಕ ಪಕ್ಷ ತಲೆನೋವಾಗಿ ಪರಿಣಮಿಸಿದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದರ ಬಗ್ಗೆ ಈಗಲೇ ಚರ್ಚೆ ಮಾಡುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ನಮಗೆ ನಮ್ಮದೇ ಆದ ಸಿದ್ಧಾಂತ ಇದೆ. ಅದರ ಪ್ರಕಾರ ರಾಜಕೀಯ ಮಾಡುತ್ತೇವೆ, ನಮ್ಮ ಸರ್ಕಾರ ಇವರು ಸಮಯದಲ್ಲಿ ಅನೇಕ ಒಳ್ಳೆಯ ಕೆಲಸವನ್ನು ಮಾಡಿದ್ದೇವೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಾನು ಮತ್ತು ಶಾಸಕ ಸೋಮಶೇಖರ ರೆಡ್ಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ: ವಿಪಕ್ಷ ನಾಯಕರು ಬಜೆಟ್ ವೇಳೆ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ಶಿಷ್ಟಾಚಾರ ಪಾಲಿಸದೆ ಅಗೌರವ ತೋರುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ ಎಂದು ಲೇವಡಿ ಮಾಡಿದರು. ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಂಡು ಬಜೆಟ್ ಮಂಡಿಸಿಲ್ಲ, ಆರ್ಥಿಕ ದೃಷ್ಟಿಕೋನವಿಟ್ಟು ಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಬಜೆಟ್ ಜನರಿಗೆ ತಲುಪದಂತೆ ಮಾಡಬೇಕೆಂಬುದು ಕಾಂಗ್ರೆಸ್ನ ಉದ್ದೇಶವಿತ್ತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನನ್ನ ಅಧಿಕಾರ ವ್ಯಾಪ್ತಿ ಅಲ್ಲ: ಸುರ್ಜೆವಾಲಾ