ಬಳ್ಳಾರಿ: ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ಅವಧಿಯನ್ನು ವಿಸ್ತರಿಸಲಾಗಿದೆಯೆಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ತಿಳಿಸಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನ್ಲೈನ್ ಮೂಲಕ ಪ್ರವೇಶದ ಅವಕಾಶ ಕೊಟ್ಟಿರುವುದರಿಂದ ಈ ಬಾರಿ ಪ್ರವೇಶಾತಿ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಆರೋಪ ಸತ್ಯವಲ್ಲ. ಉನ್ನತ ಶಿಕ್ಷಣ ವ್ಯಾಸಂಗ ಮಾಡಲಿಚ್ಛಿಸುವ (ಪಿಜಿ- ಯುಜಿ) ಬಹುತೇಕ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಒಂದೆರೆಡು ಸೀಟುಗಳು ಉಳಿದಿರಬಹುದು. ಅವುಗಳನ್ನೂ ಕೂಡ ಭರ್ತಿ ಮಾಡಿಕೊಳ್ಳಲು ಈಗಾಗಲೇ ಆಯಾ ಕಾಲೇಜಿನ ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿದೆ ಎಂದರು.
ಆಸಕ್ತ ವಿದ್ಯಾರ್ಥಿಗಳು ನೇರವಾಗಿ ಕಾಲೇಜುಗಳಿಗೆ ಹೋಗಿ ಅರ್ಜಿ ಸಲ್ಲಿಸಿದರೆ, ಆಯಾ ಕಾಲೇಜಿನ ಪ್ರಾಚಾರ್ಯರು ಕ್ರಮವಹಿಸುತ್ತಾರೆಂದು ಪ್ರೊ. ಸಿದ್ದು ಪಿ. ಅಲಗೂರ ತಿಳಿಸಿದ್ದಾರೆ.
ಇದಲ್ಲದೆ, ಬಸ್ ಪಾಸ್ ವಿತರಣೆ ಸಲುವಾಗಿ ಅರ್ಹತಾ ಪತ್ರ ನೀಡಲು ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದೆ. ಅದಕ್ಕೆ ಸಂಬಂಧಿಸಿದಂತೆ ಕೇವಲ 750 ರೂ.ಗಳ ಶುಲ್ಕ ಪಾವತಿಸಿದ್ರೆ ಸಾಕು. ಬಸ್ ಪಾಸ್ ವಿತರಣೆಯ ಕುರಿತು ಅರ್ಹತಾ ಪತ್ರ ನೀಡಲಾಗುವುದೆಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳೆಷ್ಟು: ಏನಂತಾರೆ ರೈಲ್ವೆ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷರು?
ಆನ್ಲೈನ್ನಲ್ಲಿ ಪ್ರವೇಶಾತಿ ಪ್ರಕ್ರಿಯೆ ಶುರು ಆದಾಗಿನಿಂದಲೂ ಈ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದಾರೆಂಬುದು ಶುದ್ಧ ಸುಳ್ಳು. ಈ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹಾಗೂ ಡಿಸಿಎಂ ಡಾ.ಸಿ. ಅಶ್ವಥ್ ನಾರಾಯಣ ಅವರೂ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.