ಬಳ್ಳಾರಿ: ಡಾ. ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿದ ಸಿನಿಮಾಗಳ ಅಧ್ಯಯನದಿಂದ ಆರೋಗ್ಯವಂತ ಕರ್ನಾಟಕ ಮತ್ತು ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸ. ಚಿ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಡಾ. ರಾಜಕುಮಾರ್ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತ ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠದಲ್ಲಿ ನಾನು ಕಂಡಂತೆ ಡಾ. ರಾಜಕುಮಾರ್ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಡಾ. ರಾಜ್ ಎಂದರೆ ರೋಮಾಂಚನವಾಗುತ್ತದೆ. ರಂಗಭೂಮಿ, ಸಿನಿಮಾ ಕ್ಷೇತ್ರ ಮಾತ್ರವಲ್ಲ ಅವರು ಎಲ್ಲಾ ಸಮುದಾಯಗಳ ಐಡೆಂಟಿಟಿ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ. ಅಣ್ಣ, ತಮ್ಮ, ತಂದೆ, ಪತಿಯಾಗಿ, ರಾಜನಾಗಿ, ಪುರಾಣ ಪುರುಷನಾಗಿ, ದೈವವಾಗಿ, ಆದರ್ಶ ಪುರುಷನಾಗಿ ಅವರ ನಟನೆಯನ್ನು ಚಲನಚಿತ್ರಗಳಲ್ಲಿ ಕಾಣುತ್ತೇವೆ ಎಂದರು.
ಡಾ. ರಾಜಕುಮಾರ್ ಅವರಿಗೆ ಬುದ್ಧಿವಂತಿಕೆ ಜಾಸ್ತಿ ಇತ್ತಾ ಇಲ್ಲ ಹೃದಯವಂತಿಕೆ ಜಾಸ್ತಿ ಇತ್ತೇ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ರಾಜ್ ಅವರಿಗೆ ಬುದ್ಧಿವಂತಿಕೆಗಿಂತ ಹೃದಯವಂತಿಕೆ ಜಾಸ್ತಿ ಇತ್ತು. ಈ ಕಾರಣಕ್ಕಾಗಿ ನಮಗೆ ರಾಜಕುಮಾರ್ ಮುಖ್ಯರಾಗುತ್ತಾರೆ. ರೋಗಿಷ್ಟ ಸಮಾಜದ ರೋಗವನ್ನು ನಿವಾರಣೆ ಮಾಡಲು ರಾಜ್ ಅವರು ಅಗತ್ಯವಾಗಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ, ಬೆಳೆಸಲು ರಾಜಕುಮಾರ್ ನಮಗೆ ಬೇಕು. ಬರಡಾಗಿರುವ ಹೃದಯಗಳನ್ನು ಅರಳಿಸಲು ರಾಜ್ ಬೇಕೇ ಬೇಕು ಎಂದರು.
ನಾವು ಬಣ್ಣ ಹಚ್ಚಿ ಅಭಿನಯಿಸಿದರೆ ರಾಜಕೀಯದವರು ಬಣ್ಣ ಹಚ್ಚದೆ ಅಭಿನಯಿಸುತ್ತಾರೆ ಎಂದು ರಾಜ್ ಅವರು ಹೇಳುತ್ತಿದ್ದರು. ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ದೇವರು ಮತ್ತು ಅಭಿಮಾನಿಗಳನ್ನು ಬಿಟ್ಟರೆ ಕಲಾವಿದರಿಗೆ ಸ್ಥಾನ ಎನ್ನುತ್ತಿದ್ದರು. ತಾಳ್ಮೆಯ ಪ್ರತೀಕವಾದ, ಸತ್ಯ ಪಕ್ಷಪಾತಿಯಾದ ಅವರು ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಅವರನ್ನು ಹೂವಿಗೆ ಹೋಲಿಸಬಹುದು. ದೈಹಿಕ ಸ್ವಚ್ಛತೆಗಿಂತ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದ ಅವರು ಜಾತಿ, ಮತ, ಧರ್ಮಾತೀತವಾಗಿದ್ದರು. ದ್ವೇಷದಿಂದ ಸಾಧಿಸಲಾಗದ್ದನ್ನು ಪ್ರೀತಿಯಿಂದ ಸಾಧಿಸಬಹುದು ಎಂದು ಹೇಳುತ್ತಿದ್ದರು ಎಂದು ರಾಜ್ ಅವರ ಕುರಿತಂತೆ ಗುಣಗಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಡೀನರು, ಅಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.