ಬಳ್ಳಾರಿ: ಮಹಾನಗರ ಪಾಲಿಕೆ ವತಿಯಿಂದ ಇಲ್ಲಿನ ಮುನ್ಸಿಪಲ್ ಮೈದಾನದ ತರಕಾರಿ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾದ ಕೊರೊನಾ ಸೋಂಕು ನಿವಾರಕ ಸುರಂಗಮಾರ್ಗಕ್ಕೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.
ಈ ಸುರಂಗಮಾರ್ಗದಲ್ಲಿ ಶೇ.0.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಸಲ್ಯೂಷನ್ ದ್ರವವನ್ನು ತರಕಾರಿ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಸಿಂಪಡಿಸುವ ಸಾಧನವಿದೆ.
ಪ್ರತಿದಿನ ತರಕಾರಿ ಮಾರುಕಟ್ಟೆಗೆ ಸಾರ್ವಜನಿಕರು ಕಡ್ಡಾಯವಾಗಿ ಈ ಸುರಂಗ ಮಾರ್ಗದಲ್ಲಿ ಆಗಮಿಸಿ ಕೊರೊನಾ ಸೋಂಕನ್ನ ತೊಲಗಿಸಬೇಕೆಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಮನವಿ ಮಾಡಿದರು.
ಡಿಎಂಎಫ್ ಫಂಡ್ ಬಳಕೆಗೆ ಶಾಸಕರ ಮನವಿ : ಏಪ್ರಿಲ್ 14ರ ನಂತರ ಈ ಲಾಕ್‌ಡೌನ್ ಮುಂದುವರಿದ್ರೆ ಬಡ ಮತ್ತು ಕೂಲಿಕಾರ್ಮಿಕರಿಗೆ ದಿನಸಿ ಪೂರೈಕೆ ಕಷ್ಟವಾಗಬಹುದು. ಹೀಗಾಗಿ ಜಿಲ್ಲೆಯ ಶಾಸಕರೆಲ್ಲರೂ ಡಿಸಿಎಂ ಲಕ್ಷ್ಮಣ ಸವದಿ ಅವರ ಬಳಿ ಡಿಎಂಎಫ್ ಫಂಡ್ ಬಳಕೆಗೆ ಮನವಿ ಮಾಡಿಕೊಳ್ಳಲಾಗಿದೆ.
ಹೀಗಾಗಿ ತಲಾ ಐದು ಕೋಟಿಯಂತೆ ಪ್ರತಿಯೊಬ್ಬ ಶಾಸಕರಿಗೂ ಫಂಡ್ ಬಿಡುಗಡೆ ಮಾಡಬೇಕೆಂದು ಡಿಸಿಎಂ ಸವದಿಯವರು ಸಿಎಂ ಬಿಎಸ್ವೈ ಜೊತೆಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಗಾಲಿ ಸೋಮಶೇಖರರೆಡ್ಡಿ ಹೇಳಿದರು.