ಬಳ್ಳಾರಿ: ಪ್ರತಿ ವರ್ಷ 6ರಿಂದ 7 ಕೋಟಿ ರೂಪಾಯಿ ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಹಣವನ್ನು ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಪ್ರತೀ ತಾಲೂಕಿನ ನೀರಿನ ಸಮಸ್ಯೆ ಪರಿಹರಿಸಿದರೆ ಮಾತ್ರ ಸಭೆಗೆ ಬರುತ್ತೇವೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ ಪಂಚಾಯತ್ನ ನಜೀರ್ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿದ ಸದಸ್ಯರು, ಕುಡಿಯುವ ನೀರು ಮತ್ತು ಸಣ್ಣ ನೀರಾವರಿ ಇಲಾಖೆಯು ನಗರದಲ್ಲಿ ಕಳಪೆ ಕಾಮಗಾರಿ ಮಾಡಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ, ಬಳ್ಳಾರಿ ತಾಲೂಕಿನ ಜಿಲ್ಲಾ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.
ಈಟಿವಿ ಭಾರತದೊಂದಿಗೆ ಜಿಲ್ಲಾ ಪಂಚಾಯತ್ ಸದಸ್ಯ ಆನಂದ್ ಮಾತನಾಡಿ, ಪ್ರತಿಯೊಂದು ತಾಲೂಕಿಗೆ ಕುಡಿಯುವ ನೀರಿಗಾಗಿಯೇ ಪ್ರತಿ ವರ್ಷ 6ರಿಂದ 7 ಕೋಟಿ ಅನುದಾನ ಬರುತ್ತದೆ. ಆದರೆ ಇದುವರೆಗೂ ತಾಲೂಕಿನ ಜನರಿಗೆ ನೀರು ಪೂರೈಸುವ ಕೆಲಸ ಆಗುತ್ತಿಲ್ಲ ಎಂದು ದೂರಿದರು.
ನಂತರ ಜಿಲ್ಲಾ ಪಂಚಾಯತ್ ಸದಸ್ಯೆ ರತ್ನಮ್ಮ ಮಾತನಾಡಿ, ಕೂಡ್ಲಿಗಿ ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಕಳಪೆಯಾಗಿದೆ. ತಾಲೂಕಿನ ಚಿಕ್ಕಜೋಗಿಹಳ್ಳಿ, ಎರಗುಂಡಲಹಟ್ಟಿ, ಮಾಕನಡಕು, ಕಡೆಕೊಳ ಪ್ರದೇಶಗಳಲ್ಲಿ ಶೇಕಡಾ 30ರಷ್ಟು ಕೆಲಸ ಮಾಡಿ ಸಂಪೂರ್ಣ ಬಿಲ್ ಮಾಡಿಕೊಂಡಿದ್ದಾರೆ. ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಒಂದಾಗಿ ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಆನಂದ್, ಗುರುಸಿದ್ದಪ್ಪ, ಕರೂರು ಕೋಟೇಶ್ವರರಾವ್, ರತ್ನಮ್ಮ, ಕೊಟ್ರೇಶ್, ದೀನಾ ಮಂಜುನಾಥ, ಮಲ್ಲಿಕಾರ್ಜುನ ಹಂಪಪಟ್ಟಣ ಮುಂತಾದವರು ಭಾಗವಹಿಸಿದ್ದರು.