ಬಳ್ಳಾರಿ: ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಆದರೆ, ನನ್ನ ಈ ಹೇಳಿಕೆಯನ್ನ ತಿರುಚಿ ಜನರನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಂಡೂರು ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತರಲ್ಲಿ ನಿಜಲಿಂಗಪ್ಪ, ಎಸ್ ಆರ್ ಕಂಠಿ, ವಿರೇಂದ್ರ ಪಾಟೀಲ್, ಎಸ್ ಆರ್ ಬೊಮ್ಮಾಯಿ, ಜೆ.ಹೆಚ್ ಪಾಟೀಲ್ ಪ್ರಮಾಣಿಕ ಮುಖ್ಯಮಂತ್ರಿಗಳಾಗಿದ್ದರು. ಆದರೆ, ನಾನು ಬಸವರಾಜ ಬೊಮ್ಮಾಯಿ ಮಾತ್ರ ಕರ್ನಾಟಕಕ್ಕೆ ಕಳಂಕ ತಂದ ಸಿಎಂ ಎಂದು ಹೇಳಿದ್ದೆ. ನನ್ನ ಹೇಳಿಕೆಯನ್ನ ತಿರುಚಿ ಜನರಿಗೆ ಪ್ರಚೋದಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ನಾನು ಎಲ್ಲಾ ಮನುಷ್ಯರನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿ. ಕೆಟ್ಟವರನ್ನ ಕೆಟ್ಟವರು ಎಂದು ಹಾಗೂ ಒಳ್ಳೆಯವರನ್ನ ಒಳ್ಳೆಯವರು ಅಂತಾ ಹೇಳಬೇಕು ಎಂದರು.
ನಾನು ಹಣಕಾಸು ಮಂತ್ರಿಯಾಗಿ 13 ಬಜೆಟ್ ಮಂಡನೆ ಮಾಡಿದ್ದೇನೆ. ಇಡೀ ದೇಶದಲ್ಲಿ 7 ಕೆಜಿ ಅಕ್ಕಿ ಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ. ಆದರೆ, ಬೊಮ್ಮಾಯಿ ಮತ್ತು ಅಮಿತ್ ಶಾ ಅವರು ಅಕ್ಕಿ ಕೇಂದ್ರ ಸರ್ಕಾರದ್ದು ಅಂತಾ ಹೇಳ್ತಾರೆ. ಹಾಗಾದ್ರೆ, ಗುಜರಾತ್ ಸೇರಿ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಯಾಕೆ ಉಚಿತ ಅಕ್ಕಿ ಕೊಡ್ತಿಲ್ಲ. ಬಿಜೆಪಿ ಯಾವತ್ತೂ ಬಡವರ ಪರವಾಗಿ ಇಲ್ಲ ಎಂದು ಟೀಕಿಸಿದರು.
ಕಳಂಕ ಇಲ್ಲದೇ ಸರ್ಕಾರ ನಡೆಸಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಬಿಜೆಪಿ 40 - 50 ಪರ್ಸೆಂಟ್ ಸರ್ಕಾರ. ಇಂತಹ ಸರ್ಕಾರ ಮತ್ತೆ ಬರಬೇಕಾ?, ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ತುಕರಾಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶೈಲಜಾನಾಥ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ರ ಕಾಂಗ್ರೆಸ್ ಬಳ್ಳಾರಿ ಗ್ರಾಮೀಣ ಅಧ್ಯಕ್ಷ ಶಿವಯೋಗಿ, ಮುಂಡ್ರಗಿ ನಾಗರಾಜ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಟಿಕೆಟ್ ಹಂಚಿಕೆಯಲ್ಲಿ ಸಮುದಾಯಕ್ಕೆ ನಿರ್ಲಕ್ಷ್ಯ: ಸ್ವಾಮೀಜಿ ಆರೋಪಕ್ಕೆ ಬಿ ಕೆ ಹರಿಪ್ರಸಾದ್ ತಿರುಗೇಟು
ಸುದೀಪ್ ಭರ್ಜರಿ ರೋಡ್ ಶೋ: ಇನ್ನು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬುಧವಾರ ಸಂಜೆ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಹೆಲಿಕಾಪ್ಟರ್ ಮೂಲಕ ತೋರಣಗಲ್ಲ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸುದೀಪ್ ಅಲ್ಲಿಂದ ಬಿಜೆಪಿ ಅಭ್ಯರ್ಥಿ ಶಿಲ್ಪಾ ಜೊತೆ ತೆರೆದ ವಾಹನದಲ್ಲಿ ಅಂತಾಪುರ ಗ್ರಾಮದಲ್ಲಿ ಮತಯಾಚನೆ ಮಾಡಿದರು. ಈ ವೇಳೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಳೆ ಸುರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸುದೀಪ್ ಆಗಮಿಸುತ್ತಿದ್ದಂತೆ ಜನರು ಕಿಚ್ಚಾ ,ಕಿಚ್ಚಾ ಎಂದು ಜಯಘೋಷ ಕೂಗಿದರು. ರೋಡ್ ಶೋ ನಡೆಸುವ ವೇಳೆ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಪ್ರಚಾರ ನಡೆಸುವ ವಾಹನವನ್ನು ಏರಿ ಸೆಲ್ಫಿ ತೆಗೆದುಕೊಳ್ಳಲು ಹರಸಹಾಸ ಪಟ್ಟರು. ಈ ವೇಳೆ ಪೊಲೀಸರು ಅಭಿಮಾನಿ ಮೇಲೆ ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.