ಹೊಸಕೋಟೆ: ಉಪ ಚುನಾವಣೆಯ ಜಿದ್ದಾಜಿದ್ದಿಯ ಅಖಾಡವಾಗಿರುವ ಹೊಸಕೋಟೆಯಲ್ಲಿ ಇಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿಯಾಗಿ ತಮ್ಮ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಮತಬೇಟೆ ನಡೆಸಿದರು. ಅಲ್ಲದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಂಟಿಬಿ ವಿರುದ್ಧ ಗುಡುಗಿದರು.
ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರಿರುವ ಅನರ್ಹ ಶಾಸಕ ಎಂಟಿಬಿ ಯನ್ನ ಮಣಿಸಲು ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಇಂದು ಎಂಟಿಬಿಗೆ ಕೋಟೆಗೆ ಎಂಟ್ರಿ ಕೊಟ್ಟಿದ್ದಾರೆ. ಇಡೀ ದಿನ ಕ್ಷೇತ್ರದಲ್ಲಿ ಮತಬೇಟೆ ನಡೆಸಿದ ಕಾಂಗ್ರೆಸ್ ನಾಯಕರು ಎಂಟಿಬಿ ವಿರುದ್ಧ ತೊಡೆ ತಟ್ಟಿದ್ದಾರೆ.
ತಾಲೂಕಿನ ಸೂಲಿಬೆಲೆಯ ಸಂತೆ ಮೈದಾನದಲ್ಲಿ ಕಾಂಗ್ರೆಸ್ ಬಹಿರಂಗ ಚುನಾವಣಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಸಿದ್ದರಾಮಯ್ಯ ಅವರು ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ನಮ್ಮ ಪಕ್ಷದಲ್ಲಿ ನಾಲ್ಕು ಬಾರಿ ಟಿಕೆಟ್ ಪಡೆದು ಎಂಟಿಬಿ ಸಚಿವರಾಗಿದ್ದರು. ಇದಕ್ಕಿಂತ ಇನ್ನೇನು ದೊಡ್ಡ ಸ್ಥಾನವನ್ನು ಇವರು ಬಯಸೋದು? ಬಿಜೆಪಿಯಲ್ಲಿ ಇವರು ಮುಖ್ಯಮಂತ್ರಿ ಆಗುವ ಅವಕಾಶ ಇದೆಯಾ? ಮತ್ತೆ ಯಾಕೆ ಬಿಜೆಪಿ ಹೋದ್ರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಕ್ಷೇತ್ರದ ಮತದಾರರಾದ ನಿಮ್ಮನ್ನು ಕೇಳಿ ಎಂಟಿಬಿ ಬಿಜೆಪಿ ಸೇರಿಲ್ಲ. ಇನ್ಯಾವ ಮುಖ ಹೊತ್ತುಕೊಂಡು ಬಂದು ನಿಮ್ಮ ಬಳಿ ಮತ ಕೇಳ್ತಾರೆ. ಅಧಿಕಾರ, ಅಂತಸ್ತು, ಹೆಸರು ತಂದುಕೊಟ್ಟ ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಇವರನ್ನು ಜನ ಕ್ಷಮಿಸಬೇಕಾ ಎಂದು ಕೇಳಿದ್ರು.
ಇನ್ನು ಹೊಸಕೋಟೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಲಿದ್ದು, ಪಾಪ ಬಚ್ಚೇಗೌಡ ನಮ್ ಜೊತೆಗಿದ್ದವನು. ಬಿಜೆಪಿ ಎಂ ಪಿ ಬಚ್ಚೇಗೌಡ ಮಗ ಇಂಡಿಪೆಂಡೆಂಟ್ ಅಭ್ಯರ್ಥಿ ಆಗಿದ್ದು, ಶರತ್ ಬಚ್ಚೇಗೌಡ ಗೆದ್ದರೆ ಮತ್ತೆ ಬಿಜೆಪಿಗೆ ಹೋಗ್ತಾನೆ. ಅಲ್ಪಸಂಖ್ಯಾತರು ಹುಷಾರಾಗಿರಿ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ರು.
ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಮಾತನಾಡಿ, ನಾನು ಸಂಕಷ್ಟದಲ್ಲಿದ್ದಾಗ ನನಗೆ ಪ್ರೀತಿ ತೋರಿಸಿದ ಜನರಿಗೆ ಅಭಾರಿಯಾಗಿದ್ದೇನೆ. ಸಮ್ಮಿಶ್ರ ಸರ್ಕಾರ ಬೀಳುವ ವೇಳೆ ಎಂಟಿಬಿಗೆ ರಣರಂಗದಲ್ಲಿ ಭೇಟಿ ಆಗುವುದಾಗಿ ಹೇಳಿದ್ದೆ. ಇಲ್ಲಿಯವರೆಗೆ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ನಾನು ಕ್ಷೇತ್ರದ ಮತದಾರರ ಬಳಿ ಬಂದಿದ್ದೇನೆ ಎಂದರು.
ಇಪ್ಪತ್ತು ವರ್ಷಗಳ ಹಿಂದೆ ಎಂಟಿಬಿಗೆ ನಾನೇ ಬಿ ಫಾರ್ಮ್ ಕೊಡಿಸಿದ್ದೆ. ಎಸ್.ಎಂ. ಕೃಷ್ಣ ಅವರು ಎಂಟಿಬಿ ಪರ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಆದರೆ ಪಕ್ಷಕ್ಕೆ ಮೋಸ ಮಾಡಿದ್ದಾರೆ. ನಾಗರಾಜ್ ದೊಡ್ಡ ಶ್ರೀಮಂತ ಇಲ್ಲ ಅನ್ನೋದಿಲ್ಲ. ಆದ್ರೆ ಇಷ್ಟೆಲ್ಲ ಮಾತನಾಡುವ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ತಳಪಾಯ ಹಾಕಿದ ಕ್ಷೇತ್ರದ ಮತದಾರರನ್ನು ಅವರು ಮರೆಯಬಾರದು. ರಾಜ್ಯ ರಾಜಕೀಯ ಇತಿಹಾಸದಲ್ಲಿ ಇವರು ಮಾಡಿದ ದ್ರೋಹವನ್ನು ಯಾರು ಮರೆಯಬಾರದು. 15 ಕ್ಷೇತ್ರಗಳಲ್ಲಿಯೂ ಮತದಾರರು ಅನರ್ಹರಿಗೆ ಬುದ್ಧಿ ಕಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್, ಶಾಸಕರಾದ ಕೃಷ್ಣಬೈರೇಗೌಡ, ವೆಂಕಟರಮಣಯ್ಯ, ಆನೇಕಲ್ ಶಿವಣ್ಣ, ನಂಜೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.