ಬಳ್ಳಾರಿ: ಕಲುಷಿತ ನೀರು ಸೇವಿಸಿ ಸುಮಾರು 80ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಾತ್ಕಾಲಿಕ ಆಸ್ಪತ್ರೆ ಮತ್ತು ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ವಿಮ್ಸ್ ಆಸ್ಪತ್ರೆ ಹಾಗೂ ಸಂಡೂರಿನ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯಕ್ಕೊಳಗಾದವರನ್ನು ವಿಚಾರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಿರುವ ಸಮಸ್ಯೆಗೆ ಮೇಲ್ನೋಟಕ್ಕೆ ಕಲುಷಿತ ನೀರು ಕಾರಣ ಎಂದು ತಿಳಿದುಬಂದಿದೆ. ಆದರೂ ಈ ಕುರಿತು ತನಿಖೆ ನಡೆಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲು ವಿಮ್ಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಸರಬರಾಜು ಆಗುತ್ತಿರುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಣವಾಗಿರೋದೇ ಇದಕ್ಕೆ ಮೂಲ ಕಾರಣ ಎನ್ನಲಾಗ್ತಿದೆ. ಇನ್ನೂ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುತ್ತಿರುವ ಅಕ್ಕಿಯನ್ನೂ ಸಹ ಪರೀಕ್ಷೆ ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಒತ್ತಾಯಿಸಿದರು.
ಇದನ್ನೂ ಓದಿ: ಬಳ್ಳಾರಿ: ಕಲುಷಿತ ನೀರು ಸೇವನೆ, 84 ಮಂದಿ ಆಸ್ಪತ್ರೆಗೆ ದಾಖಲು
ಅಸ್ವಸ್ಥರಲ್ಲಿ ಸದ್ಯಕ್ಕೆ ಯಾರ ಪ್ರಾಣಕ್ಕೂ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದರೂ ಸಹ ಆತಂಕ ತಪ್ಪಿಲ್ಲ. ಅಸ್ವಸ್ಥರನ್ನು ಈಗಾಗಲೇ ಸಂಡೂರು ತಾಲೂಕು ಆಸ್ಪತ್ರೆ, ಬಳ್ಳಾರಿಯ ವಿಮ್ಸ್, ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿಯೂ ಈ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.