ಬಳ್ಳಾರಿ: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಹಿರಿಯ ತರಬೇತುದಾರರು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿಂದು ಸಚಿವ ಎಸ್.ಸುರೇಶ್ ಕುಮಾರ್ ಅವರನ್ನ ಭೇಟಿಯಾದ ಕರಾಟೆ ಹಿರಿಯ ತರಬೇತುದಾರರ ನಿಯೋಗ, ಪ್ರೌಢ ಶಾಲೆಗಳ ವಿದ್ಯಾರ್ಥಿನಿಯರಲ್ಲಿ ಆತ್ಮರಕ್ಷಣೆ ಹೆಚ್ಚಿಸುವ ಸಲುವಾಗಿ ಈ ಕರಾಟೆ ತರಬೇತಿ ಮುಖ್ಯವಾಗಿದೆ. ಹಾಗಾಗಿ, ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಸಚಿವರಲ್ಲಿ ಕೋರಿದ್ದಾರೆ.
ಹಿರಿಯ ತರಬೇತುದಾರರ ಮನವಿಯನ್ನು ಆಲಿಸಿದ ಸಚಿವ ಸುರೇಶ್ ಕುಮಾರ್, ಕರಾಟೆ ತರಬೇತಿ ಪುನರಾರಂಭಿಸಲು ಚಿಂತನೆ ನಡೆಸಲಾಗುವುದು ಅಂತಾ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿಯ ಹಿರಿಯ ತರಬೇತುದಾರರಾದ ಕಟ್ಟೇಸ್ವಾಮಿ, ಸುಭಾಷ್ ಚಂದ್ರ, ಕೊಪ್ಪಳದ ಹಿರಿಯ ತರಬೇತುದಾರ ಮೌನೇಶ ವಡ್ಡಟಿ, ವಿಜಯಪುರದ ಹಿರಿಯ ತರಬೇತುದಾರ ಶಿವಕುಮಾರ ಶಾರದಳ್ಳಿ ಇದ್ದರು.