ರಾಣೆಬೆನ್ನೂರು: ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು ಕಳೆದ ಆರು ವರ್ಷದಿಂದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಸಮಸ್ಯೆಗಳನ್ನು ಸರಿದೂಗಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಬಿಜೆಪಿ ಪಕ್ಷ ಅವರಿಗೆ ಟಿಕೆಟ್ ನೀಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಮೃತ್ಯುಂಜಯ ಸಭಾ ಭವನದಲ್ಲಿ ಆಯೋಜಿಸಿದ್ದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಬಾರಿ ಬೆಂಬಲ ಸಿಗುತ್ತಿದೆ ಎಂದರೆ ಅದು ಸರ್ಕಾರದ ಸಾಧನೆಯಾಗಿದೆ. ಈಗಾಗಲೇ ಬಿಜೆಪಿ ಪಕ್ಷ ಬರಗಾಲ, ಕೊರೊನಾ, ಪ್ರವಾಹದಂತಹ ಸಮಸ್ಯೆಗಳನ್ನು ಎದುರಿಸುವ ಮೂಲಕ ಜನರಿಗೆ ಹತ್ತಿರವಾಗಿದೆ. ಇಂತಹ ಪಕ್ಷವನ್ನು ಜನರು ಪ್ರೀತಿಸುತ್ತಾರೆ ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು ಎಸ್.ವಿ.ಸಂಕನೂರ ಅವರ ಉತ್ತಮ ಕೆಲಸಗಾರರಾಗಿದ್ದು, ಸಮಸ್ಯೆ ಆಲಿಸುವಂತಹ ವ್ಯಕ್ತಿ. ಉತ್ತರ ಕರ್ನಾಟಕ ಪದವೀಧರ ಸಮಸ್ಯೆಗಳನ್ನು ಬಗೆಹರಿಸಲು ಇದೊಂದು ಬಾರಿ ನೀವು ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್, ಮಾಜಿ ಸಚಿವ ಆರ್.ಶಂಕರ, ಶಾಸಕ ಅರುಣ ಕುಮಾರ ಪೂಜಾರ, ಸಂಸದ ಶಿವಕುಮಾರ ಉದಾಸಿ, ಅಭ್ಯರ್ಥಿ ಎಸ್.ವಿ.ಸಂಕನೂರ ಸೇರಿ ಇನ್ನಿತರರು ಭಾಗವಹಿಸಿದ್ದರು.