ಬಳ್ಳಾರಿ: ಕೊರೊನಾ ಸೋಂಕು ತಡೆಗೆ ಜಿಲ್ಲೆಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಜನತೆಗೆ ಅಗತ್ಯವಾಗಿ ಬೇಕಾಗಿದ್ದ ಸ್ಯಾನಿಟೈಸರ್ ಸಂಗ್ರಹಣೆಯಲ್ಲೂ ಮುಂದಿದೆ. ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ಸ್ಯಾನಿಟೈಸರ್ ಅಭಾವವನ್ನು ಮನಗಂಡಿದ್ದ ಬಳ್ಳಾರಿ ಜಿಲ್ಲಾಡಳಿತ ಸ್ಯಾನಿಟೈಸರ್ ಉತ್ಪಾದನೆಗೆ ಆದ್ಯತೆ ನೀಡಿದೆ. ಹೊಸದಾಗಿ ಸೇರ್ಪಡೆಗೊಂಡ ಹರಪನಹಳ್ಳಿ ತಾಲೂಕಿನಲ್ಲಿರುವ ಕೆಲ ಡಿಸ್ಟಿಲರೀಸ್ ಕಂಪನಿಗಳಿಗೆ ಸ್ಯಾನಿಟೈಸರ್ ತಯಾರಿಕೆಗೆ ಅನುಮತಿ ನೀಡಲಾಗಿದೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲೂ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಕೆಲ ದಿನಗಳ ಹಿಂದೆ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆ ಮಾಡುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿದ ಜಿಲ್ಲಾಡಳಿತ ಆ ತಯಾರಿಕಾ ಘಟಕದ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.
ಈವರೆಗೆ ಎಲ್ಲಿಯೂ ಕೂಡಾ ಸ್ಯಾನಿಟೈಸರ್ ಕೊರತೆಯಾಗಿಲ್ಲ. ಮನೆಯಲ್ಲಿ ಸ್ಯಾನಿಟೈಸರ್ ಉತ್ಪಾದನೆ ಮಾಡೋದು ಅಪರಾಧವಾಗಿದೆ. ಸ್ಯಾನಿಟೈಸರ್ ಉತ್ಪಾದನೆಗೆ ಮದ್ಯ ಅವಶ್ಯಕತೆ ಇರುವ ಕಾರಣದಿಂದ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿದೆ. ಜಿಲ್ಲೆಯ ಅಂದಾಜು 2,060 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 50 ಎಂಎಲ್ನ ಬಾಟಲ್ ಅನ್ನು ವಿತರಿಸಲಾಗಿದೆ. ಅಲ್ಲದೇ, 315 ಆರೋಗ್ಯ ಕೇಂದ್ರಗಳಿಗೆ 500 ಎಂಎಲ್ನ ಕ್ಯಾನ್ಗಳನ್ನು ವಿತರಿಸಲಾಗಿದೆ.