ಸಂಡೂರು(ಬಳ್ಳಾರಿ) : ಶ್ರೀ ಕುಮಾರಸ್ವಾಮಿ ಜಾತ್ರೆ ಇಂದಿನಿಂದ ಆರಂಭಗೊಂಡಿದ್ದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಭಕ್ತರು ಪಾಲನೆ ಮಾಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರಿನ ಕುಮಾರಸ್ವಾಮಿ ಜಾತ್ರೆ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ನಡೆಯಲಿದೆ. ಕೊರೊನಾ ನಿಯಂತ್ರಣ ಹಿನ್ನೆಲೆ ಹಲವು ನಿರ್ಬಂಧಗಳನ್ನು ಜಾತ್ರೆಗೆ ವಿಧಿಸಲಾಗಿದೆ. ಜಾತ್ರೆಗೆ ಬರುವವರು ಮುಖಗವಸು ಧರಿಸಬೇಕಲ್ಲದೇ, ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ ಹಾಗೂ ಸ್ಯಾನಿಟೈಸರ್ ಬಳಸಿ ನಂತರವೇ ದೇವಸ್ಥಾನದ ಒಳಗೆ ಬರಬೇಕು. ದೇವಸ್ಥಾನದಲ್ಲಿ ಪ್ರಸಾದ, ಕಾಯಿ, ಮಂಗಳಾರತಿಗೆ ಅವಕಾಶವಿರುವುದಿಲ್ಲ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, 10 ವರ್ಷ ಒಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ.
ಐದು ವರ್ಷದಲ್ಲಿ ಎರಡು ಬಾರಿ ಈ ಜಾತ್ರೆ ನಡೆಯಲಿದ್ದು, ಶಿವಯೋಗ ಹಾಗೂ ಕೃತಿಕಾ ನಕ್ಷತ್ರ ಕೂಡಿದ ಕಾರ್ತೀಕ ಪೌರ್ಣಿಮೆಯಂದು ಈ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಈಗಾಗಲೇ ಭರದ ಸಿದ್ಧತೆಗಳು ಕೈಗೊಂಡಿದ್ದು, ದೇವಸ್ಥಾನಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ಹೋಗಲು ವಾಹನಗಳಿಗೆ ಅವಕಾಶ ಇರುವುದಿಲ್ಲ. ನಂದಿಹಳ್ಳಿಯಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ದೇವಸ್ಥಾನಕ್ಕೆ ಭಕ್ತರು ಕಾಲ್ನಡಿಗೆಯಲ್ಲೇ ಬರಬೇಕು. ದೇವಸ್ಥಾನದ ಆವರಣದಲ್ಲಿ ಯಾವುದೇ ಅಂಗಡಿ, ಹೋಟೆಲ್ಗಳಿಗೆ ಅವಕಾಶ ಕಲ್ಪಿಸಿಲ್ಲ ಮತ್ತು ದೇವಸ್ಥಾನದಲ್ಲಿ ಉಳಿದುಕೊಳ್ಳಲು ಅವಕಾಶ ಇರುವುದಿಲ್ಲ.
![sandoor sri shivkumar swami fair](https://etvbharatimages.akamaized.net/etvbharat/prod-images/kn-01-bly-301120-sandoor-kumarswamy-temple-news-ka10007_30112020024706_3011f_1606684626_194.jpg)