ಬಳ್ಳಾರಿ: ಜಿಲ್ಲೆಯ ಸಂಡೂರು ನಗರದ ಬಳಿಯಿರುವ ಅಂದಾಜು ಐನೂರು ಎಕರೆ ಪ್ರದೇಶ ವ್ಯಾಪ್ತಿಯ ಸಸ್ಯವನದಲ್ಲಿನ ತ್ಯಾಜ್ಯವನ್ನು ಶುಚಿತ್ವ ಗೊಳಿಸುವ ಮೂಲಕ ಸಂಡೂರು ಸಮ್ಮಿಟರ್ಸ್ ಚಾರಣಿಗರ ತಂಡ ವಿಶೇಷ ಗಮನ ಸೆಳೆದಿದೆ.
ಮಹಾತ್ಮ ಗಾಂಧೀಜಿಯವರ 150 ಜನ್ಮದಿನದ ನಿಮಿತ್ತ ಜಿಲ್ಲೆಯ ಸಂಡೂರು ನಗರದ ಗಂಡಿ ಮಾರೆಮ್ಮ ದೇಗುಲದ ಮುಂದಿರುವ ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶದಲ್ಲಿ ಸಂಡೂರು ಸಮ್ಮಿಟರ್ಸ್ನ ಚಾರಣಿಗರ ತಂಡ ಅರಣ್ಯ ಪ್ರದೇಶದಲ್ಲಿ ಬಿದ್ದಿದಂತಹ ಮದ್ಯದ ಬಾಟಲ್, ಪ್ಲಾಸ್ಟಿಕ್ ಸೇರಿದಂತೆ ಇತರ ಘನ ತ್ಯಾಜ್ಯ ಸ್ವಚ್ಛಗೊಳಿಸಿದರು. ಇನ್ನು ಈ ತಂಡದ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದರು.
ಸಂಡೂರು ಸಮ್ಮಿಟರ್ಸ್ ತಂಡದ ಮುಖಂಡ ಚಾರಣಿಗ ಶ್ರೀನಿವಾಸ್ ಮಾತನಾಡಿ, ಕೆಲ ಅವಿವೇಕಿಗಳ ಮತ್ತು ಕಿಡಿಗೇಡಿಗಳ ಪರಿಸರ ವಿರೋಧಿ ಚಟುವಟಿಕೆಗಳಿಂದ ಹಾಗೂ ಅರಣ್ಯ ಇಲಾಖೆ ದಿವ್ಯ ಮೌನ (ನಿರ್ಲಕ್ಷ) ದಿಂದ ಈ ಕಾಡು ಅಳಿವಿನಂಚಿನಲ್ಲಿದೆ. ಹೀಗಾಗಿ ಶುಚಿತ್ವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಇನ್ನು ಸುರೇಶ ಘೋರ್ಪಡೆ ಮಾತನಾಡಿ, ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶವನ್ನು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯವರು ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಕೊಡದಂತೆ ಕಡಿವಾಣ ಹಾಕಬೇಕು. ನಾವು ಸ್ವಚ್ಛಗೊಳಿಸಿರುವ ಈ ಪ್ರದೇಶವನ್ನು ಅಶುದ್ಧವಾಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.