ಹೊಸಪೇಟೆ: ತುಂಗಭದ್ರಾ ಜಲಾಶಯ ಉತ್ತರ ಭಾರತದ ಜೀವನಾಡಿ. ಈಗ ವಿಜಯನಗರ ಜಿಲ್ಲೆ ಹೊಸದಾಗಿ ರೂಪುಗೊಳ್ಳುತ್ತಿರುವ ಕಾರಣದಿಂದ ಈ ಜಲಾಶಯದೊಂದಿಗೆ ಬಳ್ಳಾರಿ ತನ್ನ ನಂಟನ್ನು ಕಳೆದುಕೊಳ್ಳುತ್ತದೆ.
ತುಂಗಭದ್ರಾ ಜಲಾಶಯ ನಿರ್ಮಿಸುವ ವೇಳೆ ಬಳ್ಳಾರಿಯ ಪಾತ್ರ ಹಿರಿದಾಗಿತ್ತು. ಮುಳುಗಡೆಯಾದ ಸುಮಾರು 90 ಹಳ್ಳಿಗಳಲ್ಲಿ 41 ಹಳ್ಳಿಗಳು ಬಳ್ಳಾರಿಗೆ ಸೇರಿರುತ್ತವೆ. ಆ ಸಂದರ್ಭದಲ್ಲಿ ಬಳ್ಳಾರಿ ಜನರು ಭೂಮಿ ನೀಡಲು ಒಪ್ಪದೇ ಇದ್ದಿದ್ದರೆ ಇಂದು ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ರೈತರ ಬದುಕು ಹಸನನಾಗುತ್ತಿರಲಿಲ್ಲ. ಅದೇ ರೀತಿಯಲ್ಲಿ ಬಳ್ಳಾರಿ ಜತೆಗೆ ರಾಯಚೂರು ಜಿಲ್ಲೆಯ 40 ಗ್ರಾಮಗಳು, ಧಾರವಾಡದ 9 ಗ್ರಾಮಗಳೂ ಮುಳುಗಡೆಯಾದವು.
ಈ ಮೂರು ಜಿಲ್ಲೆಯ ಒಟ್ಟು 90 ಗ್ರಾಮಗಳು ಮುಳುಗಡೆಯಾದವು. ಈ ಎಲ್ಲಾ ಗ್ರಾಮಗಳಲ್ಲಿದ್ದ 11,684 ಮನೆಗಳು ಮತ್ತು 86,293 ಎಕರೆ ಭೂಮಿ ಮುಳುಗಡೆಯಾಗಿದ್ದು, ಒಟ್ಟು 54,452 ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಯಿತು. ಭೂಮಿ ಕಳೆದುಕೊಂಡ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಭೂಮಿ ಮತ್ತು ಹಣಕಾಸಿನ ನೆರವನ್ನು ನೀಡಲಾಯಿತು.
ಬರದಿಂದ ತತ್ತರಿಸಿದ್ದವರಿಗೆ ವರವಾಗಿ ಬಂದಿತ್ತು ತುಂಗಭದ್ರಾ..!
ಬಳ್ಳಾರಿ ಜಿಲ್ಲೆಯ ಇತಿಹಾಸವನ್ನು ನೋಡಿದಾಗ 18ನೇ ಶತಮಾನದಿಂದ ಹಿಡಿದು 20ನೇ ಶತಮಾನದವರೆಗೆ ಬರದಿಂದ ತತ್ತರಿಸಿ ಹೋಗಿರುತ್ತದೆ. ಜನ, ದನ-ಕರುಗಳು ಪ್ರಾಣವನ್ನು ಕಳೆದುಕೊಂಡವು. ಇದನ್ನು ಕೊನೆಗಾಣಿಸಲು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಗುಡ್ಡಗಾಡುಗಳ ಮಧ್ಯೆ ಇರುವ ಮಲ್ಲಾಪುರ ಗ್ರಾಮದಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣ ಮಾಡಲಾಯಿತು. 1945ರಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಯಿತು. 1953ರ ಜುಲೈ 1ರಂದು ಜಲಾಶಯ ಲೋಕಾರ್ಪಣೆಯಾಯಿತು.
ತುಂಗಭದ್ರಾ ಜಲಾಶಯದಿಂದ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಆಂಧ್ರಪ್ರದೇಶದ ರೈತರ ಬದುಕು ಹಸನಾಯಿತು. ಈಗ ಬದಲಾದ ಪರಿಸ್ಥಿತಿಯಲ್ಲಿ ತುಂಗಭದ್ರಾ ಜಲಾಶಯ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. 75 ವರ್ಷಗಳ ಇತಿಹಾಸ ಇರುವ ತುಂಗಭದ್ರಾ ಜಲಾಶಯ ಈಗ ಬಳ್ಳಾರಿ ನಂಟನ್ನು ಕಳೆದುಕೊಳ್ಳಲಿದೆ. ಬಳ್ಳಾರಿ ಜನತೆಯ ತ್ಯಾಗ ಇತಿಹಾಸ ಪುಟಗಳಲ್ಲಿ ದಾಖಲಾಗಲಿದೆ.
ಈಟಿವಿ ಭಾರತದೊಂದಿಗೆ ಲೇಖಕ ಡಾ.ಜೆ.ಎಸ್.ಅಶ್ವತ್ಥ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಜಲಾಶಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಹೈದರಾಬಾದ್ ಹಾಗೂ ಮದ್ರಾಸ್ ರಾಜ್ಯಗಳು ನಿರ್ಮಾಣ ಕಾರ್ಯ ಮಾಡಿದ್ದು ವಿಶೇಷವಾಗಿದೆ. ಸತತ ಬರಗಾಲದಿಂದ ಈ ಭಾಗ ತತ್ತರಿಸಿ ಹೋಗಿತ್ತು. ಲಕ್ಷಾಂತರ ಜನರು ಹಾಗೂ ಪ್ರಾಣಿಗಳು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ತುಂಗಭದ್ರಾ ಜಲಾಶಯ ನಿರ್ಮಿಸಲಾಗಿತ್ತು ಎಂದು ಇತಿಹಾಸವನ್ನು ನೆನಪಿಸಿಕೊಂಡರು.