ಹೊಸಪೇಟೆ: ಇಲ್ಲಿನ ರಸ್ತೆಗಳಲ್ಲಿ ತಗ್ಗು -ದಿನ್ನೆಗಳು ಅಧಿಕವಾಗಿರುವ ಕಾರಣ ಸಂಚರಿಸಲು ಭಯದ ವಾತವರಣ ಸೃಷ್ಟಿಯಾಗಿದೆ. ಬಹುತೇಕ ರಸ್ತೆಗಳು ಡಾಂಬರೀಕರಣದಿಂದ ದೂರವಾಗಿದ್ದು, ಧೂಳು ತುಂಬಿದ ಮಣ್ಣಿನ ರಸ್ತೆಯಲ್ಲಿ ನಿತ್ಯ ಸಂಚರಿಸಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗಣಿನಗರಿ ಬಳ್ಳಾರಿ ಜಿಲ್ಲೆಯ ರಸ್ತೆಗಳ ವ್ಯವಸ್ಥೆ ಕೇಳುವಂತಿಲ್ಲ. ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳ ಕಾಮಗಾರಿಗಳು ನಡೆದರೆ ಇನ್ನೂ ಹಲವು ರಸ್ತೆಗಳು ಮಣ್ಣಿನಿಂದ ಪುಡಿ ಪುಡಿ ಧೂಳಿನಿಂದ ತುಂಬಿವೆ. ನಿತ್ಯ ಧೂಳಿನ ರಸ್ತೆಗಳಲ್ಲೇ ಸಂಚರಿಸುವ ಕಾರಣ ಒಂದಿಲ್ಲೊಂದು ರೋಗ ನಮ್ಮನ್ನು ಆವರಿಸುತ್ತಿವೆ ಎನ್ನುತ್ತಾರೆ ಸವಾರರು.
ರಸ್ತೆ ಬದಿಯಲ್ಲಿರುವ ಮನೆಗಳ ಬಣ್ಣವೇ ಬದಲಾಗಿದೆ. ತಿನ್ನುವ ಅನ್ನದಲ್ಲೂ ಧೂಳು ಮಿಶ್ರಣಗೊಳ್ಳುತ್ತಿದೆ. ಇದಕ್ಕಿಂತ ದುರಾದೃಷ್ಟ ಮತ್ತೊಂದಿಲ್ಲ. ಕಣ್ಣಿನಿಂದ ತುಂಬಾ ಧೂಳು ತುಂಬಿಕೊಳ್ಳುತ್ತಿದ್ದು, ಅದು ಹೀಗೆ ಮುಂದುವರಿದರೆ, ಅಂಧರಾಗುವುದು ಖಂಡಿತ ಎನ್ನುತ್ತಾರೆ ಸ್ಥಳೀಯರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ಆರೋಪಿಸುತ್ತಾರೆ.
ಹೊಸಪೇಟೆಯಿಂದ ಜಿಲ್ಲೆಗೆ ಕೆಲಸದ ನಿಮಿತ್ತವಾಗಿ ಹೋಗಬೇಕಾದಾಗ ಈ ಪಾಟಿ ಧೂಳಿರುವ ಕಾರಣ ಹೆದರಿ ಮನೆಯಲ್ಲೇ ಇರುತ್ತೇವೆ. ರಸ್ತೆಗಳಲ್ಲಿ ಆಳುದ್ದ ದೊಡ್ಡ ದೊಡ್ಡ ಗುಂಡಿಗಳಿವೆ. ತಾತ್ಕಾಲಿಕವಾಗಿಯೂ ಅವುಗಳನ್ನು ಸರಿಪಡಿಸಿಲ್ಲ. ಒಟ್ಟಿನಲ್ಲಿ ವಾಹನ ಸವಾರರ ಪಾಡು ಯಾರಿಗೂ ಹೇಳ ತೀರದಾಗಿದೆ ಎಂದು ಸವಾರರು ಅಳಲು ತೋಡಿಕೊಳ್ಳುತ್ತಾರೆ.