ಬಳ್ಳಾರಿ: ನಿವೃತ್ತಿಯಾಗಿರುವ ಆರೋಗ್ಯ ಸಹಾಯಕಿ ಗಾಯತ್ರಿ ಬಾಯಿ ಅವರು ಸಕಾಲದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚಗಾರ ಬೆಳಗಲ್ಲು ಗ್ರಾಮದ ಬಸವರಾಜ ಎಂಬುವವರ ಪತ್ನಿ ಶಿಲ್ಪಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಅವರ ಸಂಬಂಧಿಕರು ಹಾಗೂ ಆಶಾ ಕಾರ್ಯಕರ್ತರು ಸಿರುಗುಪ್ಪಕ್ಕೆ ಕರೆದುಕೊಂಡು ಬರುವಾಗ ರಾರಾವಿಯ ವೇದಾವತಿ ಹಗರಿ ನದಿ ಧುಮ್ಮಿಕ್ಕಿ ಹರಿಯುತ್ತಿತ್ತು. ಇದರಿಂದ ನದಿ ದಾಟುವುದು ಅಸಾಧ್ಯವಾಗಿತ್ತು.
ಇತ್ತ ಶಿಲ್ಪಾ ಉದರದಲ್ಲಿ ಅವಳಿ ಮಕ್ಕಳು ಇರುವುದನ್ನು ಈ ಮೊದಲೇ ಹಿರಿಯ ವೈದ್ಯ ಡಾ.ಬಸವರಾಜ್ ದೃಢಪಡಿಸಿದ್ದರು. ಇದೊಂದು ಕ್ಲಿಷ್ಟಕರ ಹೆರಿಗೆಯಾಗಿದ್ದ ಕಾರಣ ನುರಿತ ಹಾಗೂ ತಜ್ಞ ವೈದ್ಯರ ಅವಶ್ಯಕತೆ ಇತ್ತು. ಆದರೆ ನದಿ ದಾಟಲಾಗದೆ ಅನಿವಾರ್ಯವಾಗಿ ಅನ್ಯಮಾರ್ಗಗಳಿಲ್ಲದೆ ರಾರಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳೆಯನ್ನು ಕರೆ ತರಲಾಗಿತ್ತು.
ಆಗ ಅಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ಪರಿಶೀಲಿಸಿ ಇದೊಂದು ಕ್ಲಿಷ್ಟಕರ ಹೆರಿಗೆ ಪ್ರಕರಣ ತಮ್ಮಿಂದ ಕಷ್ಟವೆಂದು ಯೋಚಿಸುತ್ತಿರುವಾಗ ಆಗ ಅವರಿಗೆ ನೆನಪಾಗಿದ್ದು, ಈಗಾಗಲೇ ಇಲಾಖೆಯಿಂದ ನಿವೃತ್ತಿಯಾಗಿರುವ ಆರೋಗ್ಯ ಸಹಾಯಕಿ ಗಾಯತ್ರಿ ಬಾಯಿ. ತಕ್ಷಣ ಅವರನ್ನು ಸಂಪರ್ಕಿಸಿ ಸಹಾಯ ಕೋರುತ್ತಾರೆ.
ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಗಾಯತ್ರಿ ಬಾಯಿ ಆಸ್ಪತ್ರೆಗೆ ಧಾವಿಸಿ ಬಂದು ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ಬಾಣಂತಿ ಹಾಗೂ ಜನಿಸಿದ ಅವಳಿ ಗಂಡು ಮಕ್ಕಳು ಆರೋಗ್ಯದಿಂದಿವೆ. ನಿವೃತ್ತಿಯಾಗಿರುವ ಆರೋಗ್ಯ ಸಹಾಯಕಿ ಗಾಯತ್ರಿ ಬಾಯಿ ಅವರ ಸಮಯ ಪ್ರಜ್ಞೆಯಿಂದ ಯಾವುದೇ ಸಮಸ್ಯೆ ಇಲ್ಲದೆ ಹೆರಿಗೆ ಆಗಿದೆ. ಇವರ ಕಾರ್ಯಕ್ಕೆ ಶಿಲ್ಪಾ ಕುಟುಂಬದವರು, ಸಾರ್ವಜನಿಕರು ಮತ್ತು ತಾಲೂಕು ಆರೋಗ್ಯಾಧಿಕಾರಿ ಈರಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂತಹ ಬಿಕ್ಕಟ್ಟಿನ, ಸಂಕಷ್ಟದ ಸನ್ನಿವೇಶಗಳು, ಹೆರಿಗೆ ಪ್ರಕರಣಗಳು ಹಾಗೂ ಜೀವನ್ಮರಣದಲ್ಲಿ ಹೋರಾಡುತ್ತಿರುವ ಅನೇಕ ರೋಗಿಗಳ ಪಾಲಿಗೆ ಸೂಕ್ತ ಸಲಹೆ ಸಹಕಾರಗಳನ್ನು ನೀಡುತ್ತಿರುವ ಹಿರಿಯ ವೈದ್ಯ ಡಾ. ಬಸವರಾಜ್ ಮತ್ತು ಗಾಯತ್ರಿ ಬಾಯಿ ಅವರಿಗೆ ಶಿಲ್ಪಾ ಅವರ ಪತಿ ಬಸವರಾಜ, ಕುಟುಂಬಸ್ಥರು ಹಾಗೂ ಬೆಳಗಲ್ಲು ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.