ಬಳ್ಳಾರಿ: ಬಾಕಿ ವೇತನ ಪಾವತಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.
ಬಳ್ಳಾರಿಯ ಅವಂಬಾವಿ ಪ್ರದೇಶದಲ್ಲಿನ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮನೆ ಎದುರು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಕೈಗೊಂಡಿದ್ದ ಪ್ರತಿಭಟನೆ ವೇಳೆ ಇಬ್ಬರು ಮಹಿಳಾ ಪ್ರತಿಭಟನಾಕಾರರು ಅಸ್ವಸ್ಥರಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಮೂಲದ ಸಿದ್ದಮ್ಮ, ಬೀದರ್ ಜಿಲ್ಲೆಯ ಮೂಲದ ನಾಗಮ್ಮ ಅಸ್ವಸ್ಥರಾದ ಮಹಿಳೆಯರೆಂದು ಗುರುತಿಸಲಾಗಿದೆ. ನಿನ್ನೆ ಸಚಿವ ಬಿ. ಶ್ರೀರಾಮುಲು ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಮುನ್ನೂರಕ್ಕೂ ಹೆಚ್ಚು ಜನರ ಬಂಧನವಾಗಿತ್ತು. ಬಳಿಕ ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಅವರನ್ನ ಬಂಧಿಸಿಡಲಾಗಿತ್ತು. ಆ ವೇಳೆ, ಇಬ್ಬರು ಮಹಿಳೆಯರು ಅಸ್ವಸ್ಥಗೊಂಡಿದ್ದರು .
ಇಂದೂ ಕೂಡ ಪ್ರತಿಭಟನೆಯನ್ನು ಮುಂದುವರೆಸುವ ಸಾಧ್ಯತೆಯಿದೆ. ಬಿಸಿಎಂ ಹಾಸ್ಟೆಲ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ವೇತನ ನೀಡದೇ ಸಾವಿರಾರು ಜನರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಹಿನ್ನೆಲೆ ಪ್ರತಿಭಟನೆ ಕೈಗೊಂಡಿದ್ದರು.