ಬಳ್ಳಾರಿ: ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರಕಾರ ಘೋಷಿಸಿದ ಅಕ್ಕಿ ಸೇರಿದಂತೆ ಎರಡು ತಿಂಗಳ ಪಡಿತರವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯೂ ಪಡಿತರ ನ್ಯಾಯಬೆಲೆ ಅಂಗಡಿ ಮೂಲಕ ಬುಧವಾರದಿಂದ ವಿತರಿಸುತ್ತಿದೆ.
ವ್ಯಕ್ತಿಯೋರ್ವನಿಗೆ ತಿಂಗಳಿಗೆ 10ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಗೋಧಿ ವಿತರಣೆ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯವರು ಪ್ರತಿಯೊಬ್ಬರ ಕೈಗೂ ಸ್ಯಾನಿಟೈಸರ್ ಹಾಕಿ ಶುಚಿಯಾಗಿಸಿ ಅನಂತರ ಪಡಿತರ ವಿತರಿಸುತ್ತಿದ್ದಾರೆ.
ಇದೇ ವೇಳೆ ಜನರು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿರುವ ದೃಶ್ಯ ಸತ್ಯನಾರಾಯಣಪೇಟೆಯ ರಾಘವೇಂದ್ರ ದೇವಸ್ಥಾನದ ಹತ್ತಿರವಿರುವ ನ್ಯಾಯಬೆಲೆಯ ಅಂಗಡಿಯಲ್ಲಿ ಕಂಡುಬಂದಿತು.
ಕೊರೊನಾ ಭೀತಿ ಮಧ್ಯೆಯೂ ಬಳ್ಳಾರಿ ಜಿಲ್ಲೆಯ 695 ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಘೋಷಣೆ ಮಾಡಿರುವ ರೀತಿಯಲ್ಲಿ ಎರಡು ತಿಂಗಳ ರೇಷನ್ ಅಂದ್ರೇ ಓರ್ವ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಮತ್ತು ಎರಡು ಕೆ.ಜಿ ಗೋಧಿ ಲೆಕ್ಕದಲ್ಲಿ ಹೆಚ್ಚುವರಿ ರೇಷನ್ ವಿತರಣೆ ಮಾಡಲಾಗುತ್ತಿದೆ ಎಂದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕಾ. ರಾಮೇಶ್ವರಪ್ಪ ಅವರು ತಿಳಿಸಿದರು.