ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡುವ ವೇಳೆ ಮುನ್ನೆಲೆಗೆ ಬರುವ ಕಂಪ್ಲಿ ಸೇತುವೆ ವಿಚಾರ ನಂತರ ಮರೆಯಾಗುತ್ತಿದೆ. ಈ ಸೇತುವೆ ಗಂಗಾವತಿ ಹಾಗೂ ಕಂಪ್ಲಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಪ್ರತಿ ದಿನ ಸಾವಿರಾರು ವಾಹನಗಳು ಸೇತುವೆ ಮೂಲಕ ಸಂಚರಿಸುತ್ತವೆ. ಕಾಲಮಾನಕ್ಕೆ ತಕ್ಕಂತೆ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವಂತ ಕಾರ್ಯವಾಗಿಲ್ಲ. ಹೀಗಾಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ಮೈಸೂರು ಸಂಸ್ಥಾನದಿಂದ 1961ರಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಸೇತುವೆಗೆ ಸುಮಾರು 60 ವರ್ಷಗಳ ಇತಿಹಾಸ ಇದೆ. ಆದರೆ 60 ವರ್ಷ ಗತಿಸಿದರೂ ಹೊಸ ಸೇತುವೆ ನಿರ್ಮಾಣ ಮಾಡುವುದಕ್ಕೆ ಕಾಲ ಕೂಡಿ ಬಂದಿಲ್ಲ. ಹಳೆಯ ಸೇತುವೆ ಮೇಲೆ ಜನರು ಭಯದಿಂದ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ನದಿಗೆ ನೀರು ಹರಿಬಿಟ್ಟಾಗ ಸಂಪರ್ಕ ಕಡಿತ:
ತುಂಗಭದ್ರಾ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಾಗ ಸೇತುವೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಸೇತುವೆ ಮೂಲಕ ಹೋದರೆ 7 ಕಿ.ಮೀ. ಅಂತರದಲ್ಲಿ ಗಂಗಾವತಿ ತಲುಪಬಹುದು. ಆದರೆ ಸೇತುವೆ ಮುಳಗಡೆಯಾದರೆ ಬುಕ್ಕಸಾಗರದ ಮೂಲಕ 30 ಕಿ.ಮೀ. ಸುತ್ತು ಹೊಡೆದು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ.
ಸುರಕ್ಷಿತವಾಗಿಲ್ಲ ಸೇತುವೆ:
ಸೇತುವೆ ಮೇಲ್ಭಾಗದ ತಡೆಗೋಡೆಗಳು ಅಷ್ಟೊಂದು ಸುರಕ್ಷಿತವಾಗಿಲ್ಲ. ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಅವುಗಳು ಕಿತ್ತುಕೊಂಡು ಹೋಗಿವೆ. ಅಲ್ಲದೆ ಪಾದಚಾರಿಗಳಿಗೆ ಸೇತುವೆಯಲ್ಲಿ ಅವಕಾಶ ಕಲ್ಪಿಸಿಲ್ಲ. ಕೇವಲ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜನರು ಭಯಭೀತರಾಗಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳಿಗೆ ಪೀಕಲಾಟ:
ಕಂಪ್ಲಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಗಂಗಾವತಿಗೆ ತೆರಳುತ್ತಾರೆ. ಸೇತುವೆ ಸಂಪರ್ಕ ಕಡಿತಗೊಂಡಾಗ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಬುಕ್ಕಸಾಗರ ಮೂಲಕ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.
ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯ:
60 ವರ್ಷಗಳ ಹಿಂದೆ ಆಗಿನ ಪರಿಸ್ಥಿತಿಗೆ ತಕ್ಕಂತೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಈಗ ವಾಹನಗಳ ಓಡಾಟ ಸಂಖ್ಯೆ ಹೆಚ್ಚಾಗಿದೆ. ಸದ್ಯ ಸೇತುವೆಯನ್ನು ಇನ್ನಷ್ಟು ಎತ್ತರದಲ್ಲಿ ನಿರ್ಮಿಸಬೇಕಾಗಿದೆ. ಅಲ್ಲದೆ ಪಾದಚಾರಿಗಳಿಗೆ ಅವಕಾಶ ಸೇರಿದಂತೆ ಸುರಕ್ಷತಾ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಈ ಕುರಿತು ಕಂಪ್ಲಿಯ ಡಾ. ಎ.ಪಿ.ಜಿ.ಅಬ್ದುಲ್ ಕಲಾಂ ಸಮಿತಿ ಸಂಚಾಲಕ ಜಿಲಾನ್ ಬಿ. ಮಾತನಾಡಿ, ಕಂಪ್ಲಿ ಸೇತುವೆ ತುಂಗಭದ್ರಾ ನದಿಯಿಂದ ನೀರು ಹರಿಬಿಟ್ಟಾಗ ಮಾತ್ರ ಚರ್ಚೆಯ ವಿಷಯವಾಗಿದೆ. ಯಾಕೆಂದರೆ ಆಗ ಸಂಪರ್ಕ ಕಡಿತವಾಗುತ್ತದೆ. ಈ ಭಾಗದ ಜನರಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಈಗ ಸೇತುವೆ ಮೇಲ್ಭಾಗದ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದುರಸ್ತಿಗೆ ಬಂದಿದೆ. ಅದನ್ನು ಸರಿಪಡಿಸುವ ಕಾರ್ಯವಾಗಬೇಕಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ನೀಡಲಾಗಿದೆ. ಆದರೆ ಜನಪ್ರತಿನಿಧಿಗಳು ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಕಂಪ್ಲಿ ಸೇತುವೆ ಹಳೆದಾಗಿದೆ. ಹಾಗಾಗಿ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ 95 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಅಭಿವೃದ್ಧಿಪಡಿಸಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.