ಹೊಸಪೇಟೆ : ಹೊಸಪೇಟೆಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ನೂತನ ವಿಜಯನಗರ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಜಿಲ್ಲೆ ಜನಸಂಖ್ಯೆ ಹಾಗೂ ಭೌಗೋಳಿಕ ವಿಸ್ತಾರದಲ್ಲಿ ಅತಿದೊಡ್ಡ ಜಿಲ್ಲೆ. ಪರಿಣಾಮಕಾರಿ ಹಾಗೂ ಸಮರ್ಥ ಆಡಳಿತ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚಿಸುವ ಅಗತ್ಯವಿದೆ.
ಈ ಹಿಂದೆ 2007ರಲ್ಲೇ ವಿಜಯನಗರ ಜಿಲ್ಲೆ ರಚನೆಗಾಗಿ ಒತ್ತಾಯಿಸಿ ರಸ್ತೆತಡೆ ಪ್ರತಿಭಟನೆ, ಹೊಸಪೇಟೆ ಬಂದ್, ರಾಷ್ಟ್ರೀಯ ಹೆದ್ದಾರಿ ಬಂದ್, ರೈಲ್ ತಡೆ ಚಳವಳಿ ಮುಂತಾದ ಪ್ರತಿಭಟನೆಯ ಜೊತೆಗೆ ಸತತ 100 ದಿನ ಹೋರಾಟ, ಧರಣಿ ಸತ್ಯಾಗ್ರಹ ನಡೆಸಿ ಅಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ನೂತನ ಜಿಲ್ಲೆ ರಚನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಜಿಲ್ಲೆಯು 11 ತಾಲೂಕುಗಳನ್ನು ಒಳಗೊಂಡಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿ ಅಧ್ಯಕ್ಷರಾಗಿದ್ದ ಡಿ ಎಂ ನಂಜುಡಪ್ಪ ಸಮಿತಿಯ ವರದಿಯಂತೆ ಜಿಲ್ಲೆಯ ಪಶ್ಚಿಮ ಭಾಗದ ಹಡಗಲಿ, ಹೆಚ್ ಬಿ ಹಳ್ಳಿ ಕೂಡ್ಲಿಗಿ, ಹರಪನಹಳ್ಳಿ, ಕೊಟ್ಟೂರು, ತಾಲೂಕುಗಳನ್ನು ಅತೀ ಹಿಂದುಳಿದ ತಾಲೂಕುಗಳು ಎಂದು ವರ್ಗೀಕರಿಸಲಾಗಿದೆ.
ಈ ತಾಲೂಕುಗಳು ಜಿಲ್ಲಾ ಕೇಂದ್ರದಿಂದ ಅತ್ಯಂತ ದೂರದಲ್ಲಿರುವುದು ಇವುಗಳ ಹಿಂದುಳಿಯುವಿಕೆಗೆ ಪ್ರಮುಖ ಕಾರಣ ಎಂದು ತಿಳಿಸಲಾಗಿದೆ. ಹಾಗಾಗಿ, ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮಲ್ಲಾರಿ ದೀಕ್ಷಿತ್, ವೈ ಯಮುನೇಶ್, ಗುಜ್ಜಲ ನಾಗರಾಜ್, ಎಂ ಸಿ ವೀರಸ್ವಾಮಿ, ತಾರಿಹಳ್ಳಿ ಹನುಮಂತಪ್ಪ, ನಿಂಬಗಲ್ ರಾಮಕೃಷ್ಣ ಇನ್ನಿತರರಿದ್ದರು.