ಹೊಸಪೇಟೆ: ಸಂವಿಧಾನ ರಕ್ಷಣಾ ಸಮಿತಿ ಹೊಸಪೇಟೆ ವತಿಯಿಂದ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ, ಪೌರತ್ವ (ತಿದ್ದುಪಡಿ) ಕಾಯ್ದೆ 2019 ವಿರೋಧಿಸಿ ದೇಶಾದ್ಯಂತ ಸರಣಿ ಹೋರಾಟಗಳು ಮುಂದುವರೆದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಾ ಸಂವಿಧಾನಕ್ಕೆ ಅವಮಾನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ದೇಶಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ಗಲಭೆಗಳು ನಡೆಯುತ್ತಿವೆ. ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ದೇಶದಲ್ಲಿ ಬಗೆಹರಿಯದ ಸಮಸ್ಯೆಗಳು ಸಾಕಷ್ಟಿವೆ. ಆದರೆ ಕೇಂದ್ರ ಸರ್ಕಾರ ಅಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದರೆ, ಇಂದು ದೇಶದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಇರುತ್ತಿರಲಿಲ್ಲ. ದೇಶದಲ್ಲಿ 1955ರಿಂದ ಪೌರತ್ವ ಕಾಯ್ದೆ ಜಾರಿಯಲ್ಲಿದೆ. ಆ ಕಾಯ್ದೆಯ ಪ್ರಕಾರ, 5 ರೀತಿಯಲ್ಲಿ ಪೌರತ್ವ ದೊರೆಯುತ್ತದೆ. ಹುಟ್ಟಿನಿಂದ, ನಮ್ಮ ತಂದೆ ತಾಯಿಗಳಿಂದ, ನೊಂದಣಿಯಿಂದ, ಈ ದೇಶದಲ್ಲಿ 10-11ವರ್ಷ ವಾಸವಾಗಿರುವುದರಿಂದ ಹಾಗೂ ಬೇರೆ ದೇಶವನ್ನು ಆಕ್ರಮಿಸಿದಾಗ ಆ ದೇಶದ ಪೌರತ್ವ. ಹೀಗೆ 5 ವಿಧದಲ್ಲಿ ದೊರೆಯುತ್ತದೆ. ಸರ್ಕಾರದ (ತಿದ್ದುಪಡಿ) ಕಾಯ್ದೆ ಅನ್ವಯ ಪೌರತ್ವ ಪರಿಶೀಲನೆಗೆ ಒಳಪಡಿಸಿ ಅಲ್ಪಸಂಖ್ಯಾತರಿಗೆ ಅನ್ಯಾಯವನ್ನು ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ದಾಖಲೆಗಳನ್ನು ನೀಡುವಲ್ಲಿ ವಿಫಲರಾವರನ್ನು ಬಂಧನ ಕೇಂದ್ರಗಳಿಗೆ ಕಳಿಸಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಪ್ರಕಾರ, ಹುಟ್ಟಿನಿಂದಲೇ ಪೌರತ್ವ ಸಾಬೀತುಪಡಿಸಬೇಕು. ಆದಿವಾಸಿ ಪರಿಶಿಷ್ಟ, ಜಾತಿ ಪರಿಶಿಷ್ಟ ಪಂಗಡ ಜನರಿಗೆ ಜನರಿಗೆ ದಾಖಲೆಗಳಿಲ್ಲ. ಇಂತಹ ಸಂದರ್ಭದಲ್ಲಿ ಎನ್ಆರ್ಸಿ ಮತ್ತು ಸಿಎಎ ಹೆಸರಲ್ಲಿ ಕೇಂದ್ರ ಸರ್ಕಾರ ಒಡೆದಾಳುವ ನೀತಿಗೆ ಅಲ್ಪಸಂಖ್ಯಾತ ಬಡವರು ಬಲಿಯಾಗುತ್ತಾರೆ ಎಂದು ಟೀಕಿಸಿದ್ರು.