ಬಳ್ಳಾರಿ: ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಮಾರುತಿ (23) ಎಂಬ ಯುವಕ ಮೃತಪಟ್ಟಿದ್ದಾನೆ. ಘಟನೆಗೆ ಜಿಲ್ಲೆಯ ಕಂಪ್ಲಿ ತಾಲೂಕಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಹಾಗೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತನ ಸ್ನೇಹಿತರು ಹಾಗೂ ಗ್ರಾಮದ ಯುವಕರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಬುಧವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಹಾವು ಕಚ್ಚಿದ ತಕ್ಷಣ ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾರುತಿ ಎಂಬ ಯುವಕನನ್ನು ಜ. 12ರಂದು ಕರೆ ತರಲಾಗಿತ್ತು. ಆದರೆ, ಈ ಸಮಯದಲ್ಲಿ ಯುವಕನನ್ನು ವಿಚಾರಿಸಲು ಹಾಗೂ ತುರ್ತು ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಯಾರು ಇರಲಿಲ್ಲ. ಸುಮಾರು ಒಂದು ಗಂಟೆ ಆಸ್ಪತ್ರೆಯಲ್ಲಿ ಕಾದರೂ, ವೈದ್ಯಾಧಿಕಾರಿಗಳಾಲಿ ಅಥವಾ ಸಿಬ್ಬಂದಿಗಳಾಗಲಿ ಚಿಕಿತ್ಸೆ ನೀಡಲು ಬಂದಿರಲಿಲ್ಲ. ಸಿಬ್ಬಂದಿಗಳು ಇಲ್ಲದ ಕಾರಣ ಬಳ್ಳಾರಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ತೆರಳಿದಾಗ, ಗಂಗಾವತಿಗೆ ಕರೆದೊಯ್ಯಲು ಶಿಫಾರಸ್ಸು ಮಾಡಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಮೂಲಕ ಗಂಗಾವತಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲದಿವುದರಿಂದ ಗಂಗಾವತಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಯುವಕ ಪ್ರಾಣ ಬಿಟ್ಟಿದ್ದಾನೆ. ಗಂಗಾವತಿಯ ಖಾಸಗಿ ಆಸ್ಪತ್ರೆಗೆ ತೆರಳಿದಾಗ, ಯುವಕ ಮಾರುತಿ ಸಾವಿಗೀಡಾಗಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲದಲ್ಲಿ ವೈದ್ಯರಿರಲಿಲ್ಲ. ಆ್ಯಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಇರಲಿಲ್ಲ. ಈ ಎಲ್ಲಾ ಕಾರಣದಿಂದ ಯುವಕ ಮೃತಪಟ್ಟಿದ್ದಾನೆ. ಯುವಕ ಸಾವಿಗೀಡಾಗಲು ಇಲ್ಲಿನ ಆಸ್ಪತ್ರೆ ಸಿಬ್ಬಂದಿಗಳೇ ಕಾರಣ. ಇಂತಹ ಘೋರ ಸಾವು ಬೇರೆಯವರಿಗೆ ಬರಬಾರದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು
ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಲು ವೈದ್ಯರು, ಸಿಬ್ಬಂದಿ ವ್ಯವಸ್ಥೆ ಒದಗಿಸಬೇಕು. ಆಕ್ಸಿಜನ್ ವ್ಯವಸ್ಥೆ ಇರುವ ಆ್ಯಂಬ್ಯುಲೆನ್ಸ್ ಒದಗಿಸಬೇಕು. ಯುವಕನ ಸಾವಿಗೆ ಕಾರಣರಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಗಣೇಶಗೆ ಮನವಿ ಪತ್ರ ಸಲ್ಲಿಸಿದರು.