ಬಳ್ಳಾರಿ: ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ - ಕಾಲೇಜುಗಳ ಶುಲ್ಕವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ವಿವಿಯ ಪರೀಕ್ಷಾ ಶುಲ್ಕವನ್ನು ರದ್ದುಪಡಿಸಬೇಕು. ಈಗಾಗಲೇ ಶುಲ್ಕ ಪಡೆದಲ್ಲಿ ಅದನ್ನ ವಾಪಸ್ ನೀಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ನ ಪದಾಧಿಕಾರಿಗಳು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಎಐಡಿಎಸ್ಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸುರೇಶ ಅವರ ನೇತೃತ್ವದಲ್ಲಿ ನಾಲ್ಕಾರು ವಿದ್ಯಾರ್ಥಿಗಳು ಜಿಲ್ಲೆಯ ಡಿಸಿ ಕಚೇರಿಯ ಆವರಣದಲ್ಲಿಂದು ಸಾಂಕೇತಿಕವಾಗಿ ಪ್ರತಿಭಟಿಸಿ, ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ರು.
ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಎಲ್ಲ ವಿದ್ಯಾರ್ಥಿಗಳ ಶಿಷ್ಯ ವೇತನವನ್ನ (ಸ್ಕಾಲರ್ ಶಿಪ್) ಹೆಚ್ಚಿಸಿ ಕಡ್ಡಾಯವಾಗಿ ವಿತರಿಸಬೇಕು. ಸರ್ಕಾರಿ ಹಾಸ್ಟೆಲ್ಗಳ ಅನುದಾನವನ್ನು ಹೆಚ್ಚಿಸಿ ಹಾಗೂ ಹಾಸ್ಟೆಲ್ ಸೌಕರ್ಯವನ್ನು ಶೈಕ್ಷಣಿಕ ವರ್ಷಾರಂಭದಲ್ಲಿಯೇ ಒದಗಿಸಬೇಕು ಹಾಗೂ ಆನ್ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆ ನಡೆಸಬಾರದು ಎಂದರು.
ನಂತರ ಮಾತು ಮುಂದುವರೆಸಿದ ಅವರು, ಪರೀಕ್ಷೆಯ ರೂಪುರೇಷೆಯನ್ನು ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪ್ರಜಾ ತಾಂತ್ರಿಕವಾಗಿ ರೂಪಿಸತಕ್ಕದ್ದು. ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿದ ಶಾಲೆ- ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳನ್ನ ಸಂಪೂರ್ಣವಾಗಿ ಶುದ್ಧೀಕರಿಸಿ ಸ್ಯಾನಿಟೈಸ್ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಅದನ್ನ ನೀಡಬೇಕು ಎಂದು ಒತ್ತಾಯಿಸಿದರು.