ಬಳ್ಳಾರಿ: ಶಾಸಕ ಸೋಮಶೇಖರರೆಡ್ಡಿಯವರ ಪ್ರಚೋದನಕಾರಿ ಭಾಷಣಕ್ಕೆ ಗಣಿನಾಡು ಬಳ್ಳಾರಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಸಾವಿರಾರು ಮುಸ್ಲಿಂ ಧರ್ಮೀಯರೊಂದಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು, ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಕೆಲಕಾಲ ಘೋಷಣೆ ಕೂಗಿದ್ರು. ಬಳಿಕ ವೃತ್ತದಲ್ಲಿ ಟೈಯರ್ಗೆ ಬೆಂಕಿಹಚ್ಚಿ ಅಕ್ರೋಶ ವ್ಯಕ್ತಪಡಿಸಿದ್ರು. ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟುಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಎನ್.ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಾನಯ್ಯ ಸೇರಿದಂತೆ ಇನ್ನಿತರ ಮುಖಂಡರು ಭೇಟಿ ನೀಡಿ, ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ರು.
ಐಜಿಪಿ ಭೇಟಿ: ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಪ್ರತಿಭಟನಾಕಾರರನ್ನು ಕಳುಹಿಸುವಂತೆ ಎಸ್ಪಿ ಬಾಬಾ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಎಫ್.ಐ.ಆರ್ ದಾಖಲು:
ನಗರದ ನಿಸರ್ಗ ಹೋಟೆಲ್ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಎಸ್ಪಿ, ಸಿ.ಕೆ. ಬಾಬಾ ಅವರು, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಭಾಷಣದಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಅದರ ಬಗ್ಗೆ ಮನವಿ ಪತ್ರ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸ್ವೀಕರಿಸಿದ್ದೇವೆ. ಅದರ ಆಧಾರದ ಸೋಮಶೇಖರ ರೆಡ್ಡಿ ಮತ್ತು ಆಯೋಜಕರ ಮೇಲೆ ಸಹ ಎಫ್.ಐ.ಆರ್ ಹಾಕಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.