ಬಳ್ಳಾರಿ : ಜಿಲ್ಲೆಯ ಕುರುಗೋಡು ಬೆಟ್ಟ-ಗುಡ್ಡಗಳಲ್ಲಿ ಕಲ್ಲು ಒಡೆಯುವ ಪರವಾನಗಿ ರದ್ದುಪಡಿಸಿರುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಕುರುಗೋಡು ತಾಲೂಕು ಕಚೇರಿ ಮುಂದೆ ಸಿಐಟಿಯು ಸಂಘಟನೆ, ಟ್ರ್ಯಾಕ್ಟರ್ ಮತ್ತು ಲಾರಿ ಕಾರ್ಮಿಕರ ಸಂಘ ಹಾಗೂ ಕಲ್ಲು ಒಡೆಯುವ ಕಾರ್ಮಿಕರು ಮತ್ತು ಹಾಗೂ ಹಮಾಲಿ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಧರಣಿ ನಡೆದಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ದಲಿತ ಕಾರ್ಮಿಕರು, ಹಮಾಲಿ ಕೂಲಿ ಕಾರ್ಮಿಕರು ಕಳೆದ 60 - 70 ವರ್ಷಗಳಿಂದ ಕುರುಗೋಡಿನ ಬೆಟ್ಟ ಗುಡ್ಡಗಳಲ್ಲಿ ಸಣ್ಣ ಪುಟ್ಟ ಕಲ್ಲು ಒಡೆದು ಜೀವನ ನಡೆಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಇದೇ ವೃತ್ತಿ ಅವಲಂಬಿಸಿದ್ದಾರೆ. ಈ ಹಿಂದೆ ಸರ್ವೆ ನಂಬರ್ 666 ರಲ್ಲಿ ಭೂ ವಿಜ್ಞಾನ ಇಲಾಖೆ ವ್ಯಾಪ್ತಿಯ ಅನುಮತಿಯೊಂದಿಗೆ ಕಲ್ಲಿನ ಕೆಲಸ ಮಾಡುತ್ತಿದ್ದಾರೆ. ಈಗ ಭೂ ವಿಜ್ಞಾನ ಹಾಗೂ ಗಣಿ ಇಲಾಖೆಯವರು ಪರವಾನಿಗೆ ರದ್ದು ಮಾಡಿದ್ದಾರೆ. ಕೆಲವು ಅಧಿಕಾರಿಗಳು ನಾವು ಯಾವುದೇ ರೀತಿಯ ಕೆಲಸ ಮಾಡದಂತೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ನಮ್ಮ ಕೆಲಸದ ಸಾಮಾನುಗಳಾದ ಸುತ್ತಿಗೆ, ಮೊಳೆ ಹಾಗೂ ಕಲ್ಲು ಒಡೆಯುವ ಸಾಮಗ್ರಿಗಳ ಜೊತೆಗೆ ಕಲ್ಲು ಸಾಗಿಸುವ ಟ್ರ್ಯಾಕ್ಟರ್, ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಹೀಗಾಗಿ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟವಾಗಿದೆ. ಇದರಿಂದಾಗಿ ಕೆಲಸ ಬಿಟ್ಟು, ಊರು ಬಿಟ್ಟು, ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡ್ರು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಮಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.