ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪಾದರಕ್ಷೆ ನಿರ್ವಹಣೆಗೆ ಸಮಸ್ಯೆ - ಬಳ್ಳಾರಿ ಸುದ್ದಿ
ಕೊರೊನಾದಿಂದ ಚಪ್ಪಲಿ ನಿರ್ವಹಣೆಯಲ್ಲಿ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಟೆಂಡರ್ ಕರೆಯಲಾಗುವುದು. ಅಲ್ಲದೆ ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿರೂಪಾಕ್ಷೇಶ್ವರ ದೇವಸ್ಥಾನದ ಇಒ ಪ್ರಕಾಶ್ ರಾವ್ ತಿಳಿಸಿದ್ದಾರೆ.
ಹೊಸಪೇಟೆ: ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಚಪ್ಪಲಿ ನಿರ್ವಹಣೆಗೆ ಕೊರೊನಾ ಸಮಸ್ಯೆಯನ್ನುಂಟು ಮಾಡಿದೆ. ಇದರಿಂದ ವಿರೂಪಾಕ್ಷೇಶ್ವರ ಗೋಪುರ ಮುಂಭಾಗ ಭಕ್ತರ ಹಾಗೂ ಪ್ರವಾಸಿಗರ ಪಾದರಕ್ಷೆಗಳು ಎಲ್ಲೆಂದರಲ್ಲಿ ಬಿದ್ದಿವೆ.
ಹಂಪಿಗೆ ಪ್ರತಿ ದಿನ ಸಾವಿರಾರು ಜನರು ವಿರೂಪಾಕ್ಷೇಶ್ವರನ ದರ್ಶನ ಮಾಡಲು ಬರುತ್ತಾರೆ. ಇಲ್ಲಿ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರದ ಹೊರಗಡೆ ಚಪ್ಪಲಿ ನಿರ್ವಹಣೆ ಟೆಂಡರ್ ಕರೆಯುತ್ತದೆ. ಆದರೆ, ಈಗ ಕೊರೊನಾದಿಂದಾಗಿ ಸಮಸ್ಯೆಯಾಗಿದೆ. ಈ ಹಿಂದೆ ವಿರೂಪಾಕ್ಷಿ ಎಂಬವರಿಗೆ 7 ಲಕ್ಷ ರೂ.ಗೆ ಒಂದು ವರ್ಷದ ಟೆಂಡರ್ ಆಗಿತ್ತು. ಅವರು ಒಬ್ಬರಿಂದ 2 ರೂ. ಪಡೆದು ಚಪ್ಪಲಿಗಳನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ, ಮಾರ್ಚ್ ಅಂತ್ಯಕ್ಕೆ ಲಾಕ್ಡೌನ್ ಘೋಷಣೆದ ಬಳಿಕ ಪ್ರವಾಸಿಗರು ಹಂಪಿಗೆ ಬರದಂತಾಯಿತು. ಹೀಗಾಗಿ ಟೆಂಡರ್ ಪಡೆದವರು ಸಂಕಷ್ಟ ಅನುಭವಿಸುವಂತಾಗಿ, ಮರು ಟೆಂಡರ್ ಮಾಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ದತ್ತಿ ಇಲಾಖೆ ಟೆಂಡರ್ ಕರೆಯಲು ಆಲೋಚಿಸಿದೆ.
ಆದಷ್ಟು ಬೇಗ ಇಲಾಖೆಯು ಸಮಸ್ಯೆಯನ್ನು ಹೋಗಲಾಡಿಸಲು ಮುಂದಾಗಬೇಕಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇವಸ್ಥಾನದ ಮುಂದೆ ಚಪ್ಪಲಿ ರಾಶಿ ಕಣ್ಣಿಗೆ ಬೀಳುತ್ತಿದೆ. ಈ ಬಗ್ಗೆ ವಿರೂಪಾಕ್ಷೇಶ್ವರ ದೇವಸ್ಥಾನದ ಇಒ ಪ್ರಕಾಶ್ ರಾವ್ ಮಾತನಾಡಿ, ಕೊರೊನಾದಿಂದ ಚಪ್ಪಲಿ ನಿರ್ವಹಣೆಯಲ್ಲಿ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಟೆಂಡರ್ ಕರೆಯಲಾಗುವುದು. ಅಲ್ಲದೆ ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.