ಬಳ್ಳಾರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹತ್ಯೆ ಸಂಚು ಕುರಿತು ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಬರೆದಿದ್ದ ಪತ್ರ ಕುರಿತು ಹಾಸ್ಯ ಮಾಡಿದ್ದ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ ಬಚಾವ್ ಆಂದೋಲನ ಸಂಘಟನೆಯ ಕಾರ್ಯದರ್ಶಿ ಜಗದೀಶ್ ಎನ್ನುವವರು ಸೂಲಿಬೆಲೆ ವಿರುದ್ಧ ದೂರ ದಾಖಲಿಸಿದ್ದಾರೆ.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ ಏಪ್ರಿಲ್ 14 ರಂದು ಟೀಮ್ ಮೋದಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ, ರಾಹುಲ್ ಗಾಂಧಿಯನ್ನು ಕೊಲ್ಲಬೇಕು ಎಂದು ಬಯಸುವಂತ ಪುಣ್ಯಾತ್ಮನಿಗೆ ಅವಾರ್ಡ್ ಕೊಡಬೇಕು ಎಂದು ಹೇಳಿದ್ದರು. ಈ ಹೇಳಿಕೆಯು ಹೀನ ಕೃತ್ಯಕ್ಕೆ ಪ್ರಚೋದನೆ ನೀಡುವುದಾಗಿದೆ ಎಂದು ಜಗದೀಶ್ ದೂರ ದಾಖಲಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡುವಂತಹ ಪ್ರಚೋದನಕಾರಿ ಭಾಷಣ ಮಾಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ ಎಂದು ತಿಳಿಸಿದರು.