ವಿಜಯನಗರ : ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷೆಯಾಗಿ ಎ. ಪದ್ಮಾಬಾಯಿ ಅವರು ಲಾಟರಿ ಚೀಟಿ ಎತ್ತುವ ಮೂಲಕ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷೆ ಬಿ.ಎಸ್. ಸುಮಲತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಚುನಾವಣೆ ನಡೆಸಲಾಗಿತ್ತು.
ಅಪ್ಪೇನಹಳ್ಳಿ ಪಂಚಾಯತ್ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು. ಅಂತೆಯೇ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ. ಪದ್ಮಾಬಾಯಿ ಹಾಗೂ ಕೆ. ಭೂಮಿಕಾ ಎಂಬವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪಂಚಾಯತಿನ ಎಲ್ಲಾ 19 ಸದಸ್ಯರೂ ಮತ ಚಲಾಯಿಸಿದ್ದರು. ಆದರೆ ಒಂದು ಮತ ತಿರಸ್ಕೃತಗೊಂಡ ಕಾರಣ, ಎ. ಪದ್ಮಾಬಾಯಿ ಹಾಗೂ ಕೆ. ಭೂಮಿಕಾ ಇಬ್ಬರೂ ತಲಾ 9 ಮತಗಳನ್ನು ಪಡೆದಿದ್ದರು.
ಇಬ್ಬರು ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಟಿ. ಜಗದೀಶ್ ಅವರು ಲಾಟರಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರ ಕೈಗೊಂಡು ಇಬ್ಬರು ಅಭ್ಯರ್ಥಿಗಳ ಹೆಸರನ್ನು ಚೀಟಿ ಹಾಕಿದ್ದಾರೆ. ಇದರಲ್ಲಿ ಎ. ಪದ್ಮಾಬಾಯಿ ಅವರು ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹನುಮಂತಪ್ಪ, ಚುನಾವಣಾ ವಿಭಾಗದ ಶಿರೆಸ್ತೇದಾರ್ ಈಶಪ್ಪ, ಸಿಬ್ಬಂದಿ ಶಿವಕುಮಾರ್, ಜಿ. ವಾಸುದೇವ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ತಾನೇ ದುರ್ಗೆಯ ಅವತಾರ ಎಂದಳು.. ಪೊಲೀಸರಿಗೇ ಮಾಟ - ಮಂತ್ರ ಮಾಡಿದ್ಳು.. ಏನಿದು ಕತೆ?