ಹೊಸಪೇಟೆ (ವಿಜಯನಗರ): ಹಾವು, ಕರಡಿ, ಹೆಬ್ಬಾವು ಸೇರಿದಂತೆ ಅಪಾಯಕಾರಿ ಪ್ರಾಣಿಗಳನ್ನು ಕಂಡರೆ ಮಾರುದ್ದ ಓಡುವವರೇ ಜಾಸ್ತಿ. ಆದರೆ, ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದ ವೇಣುಗೋಪಾಲ ಎಂಬುವರು ಸತತ 30 ವರ್ಷಗಳಿಂದ ಹಾವು ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ.
ವೇಣುಗೋಪಾಲ ಅವರು 1990 ರಿಂದ ಹಾವು ಸೇರಿ ಅಪಾಯಕಾರಿ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ತಮ್ಮ ಜಮೀನಿನಲ್ಲಿ ವಿವಿಧ ಕೋಳಿ, ವೀನು, ಬಾತುಗಳನ್ನು ಸಾಕುವುದರ ಜತೆಯಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ.
ಅವರಿಗೆ ಆಸಕ್ತಿ ಬೆಳೆದಿದ್ದು ಹೇಗೆ ?: ಒಮ್ಮೆ ತಂದೆ ಜೊತೆಗೆ ಜಮೀನಿನಲ್ಲಿ ಊಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪಕ್ಷಿಗಳು ಮೊಟ್ಟೆಗಳನ್ನು ಸಂರಕ್ಷಿಸಿಕೊಳ್ಳಲು ಕೇರೆ ಹಾವೊಂದನ್ನು ಕುಕ್ಕುತ್ತಿದ್ದವು. ಇದನ್ನು ಕಂಡ ವೇಣು ಅವರ ತಂದೆ ಹಾವನ್ನು ಹಿಡಿದು ಡಬ್ಬಿಗೆ ಹಾಕಲು ಸೂಚಿಸಿದ್ದರಂತೆ. ಆಗಿನಿಂದ ಹಾವು ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.
25 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಣೆ: ತಮ್ಮ 30 ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ್ದಾರೆ. ಮೊಸಳೆ, ಕೆಂಪು ಕೋತಿಗಳು, ಕರಡಿಗಳನ್ನು ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇವರು ಬಳ್ಳಾರಿ ಜಿಲ್ಲೆಗೆ ಚಿರಪರಿಚಿತರು. ಆನೆಕಲ್ಲು ಹಾಗೂ ಚಿತ್ರದುರ್ಗ ಸೇರಿದಂತೆ ನಾನಾ ಕಡೆ ಹಾವುಗಳನ್ನು ಸಂರಕ್ಷಿಸುವ ಕಾರ್ಯ ಮಾಡಿದ್ದಾರೆ. ಇವರಿಗೆ ಅರಣ್ಯ ಇಲಾಖೆ ಕೂಡ ಸಾಥ್ ನೀಡುತ್ತಿದೆ.
ಹಾವುಗಳನ್ನು ಸಂರಕ್ಷಿಸುವ ವೇಳೆ ಹಲವು ಬಾರಿ ಕಚ್ಚಿಸಿಕೊಂಡ ಉದಾಹರಣೆಗಳಿವೆ. ಪ್ರಾಣಿಗಳು ಅಟ್ಟಿಸಿಕೊಂಡು ಬಂದಿವೆ. ಈ ನಡುವೆಯೂ ಅವರು ಸಂರಕ್ಷಿಸುವ ಕಾರ್ಯ ಮಾತ್ರ ಬಿಟ್ಟಿಲ್ಲ.
ಕಾಡು ನಾಶದಿಂದ ನಾಡಿಗೆ ಪ್ರಾಣಿಗಳು: ಮಾನವ ಕಾಡು ನಾಶ ಮಾಡಿದ್ದರಿಂದ ನಾಡಿಗೆ ಪ್ರಾಣಿಗಳು ಬರುತ್ತಿವೆ. ಎಲ್ಲರೂ ಮೊದಲು ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಆಹಾರವನ್ನರಸಿಕೊಂಡು ನಾಡಿಗೆ ಬರುತ್ತಿವೆ. ಅರಣ್ಯ ನಾಶ ಮಾಡುವುದನ್ನು ನಿಲ್ಲಿಸುವಂತೆ ಅವರು ಸಲಹೆ ನೀಡಿದರು.
ಹಾವನ್ನು ನೋಡಿ ಗಾಬರಿಯಾಗಬೇಡಿ: ಹಾವುಗಳನ್ನು ಹಿಡಿಯುವ ವಿಧಾನ ಇರುತ್ತದೆ. ಆ ಮೂಲಕ ಹಾವುಗಳು ಮನೆಯಲ್ಲಿದ್ದಾಗ ಜನರು ಗುಂಪುಗೂಡಬಾರದು. ಇದರಿಂದ ಹಾವು ವಿಚಲಿತಗೊಳ್ಳುತ್ತದೆ. ಅದರ ಪಾಡಿಗೆ ಅದನ್ನು ಬಿಟ್ಟರೆ ಅದು ತಾನಾಗೇ ಹೋಗುತ್ತದೆ. ಹಾವು ಮನೆಯಲ್ಲಿ ಬಂದರೆ ಕೇಡಾಗುತ್ತದೆ ಎಂದು ಯೋಚಿಸುತ್ತಾರೆ. ಅದೆಲ್ಲಾ ಸುಳ್ಳು, ಹಾವು ಕೇಡು ಮಾಡುವುದಿಲ್ಲ ಎಂದರು.