ಬಳ್ಳಾರಿ: 2007ರಲ್ಲಿ ಸಿಎಂ ಕುಮಾರಸ್ವಾಮಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಅಂದು ಅರೆಬರೆಯಾಗಿ ಮಾಡಿದ್ದ ಹಲವಾರು ಕಾಮಗಾರಿಗಳು ಇಂದಿಗೂ ಸಂಪೂರ್ಣವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.
2007ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಮಯದಲ್ಲಿ ಅಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ಗ್ರಾಮದಲ್ಲಿ ಸರಿಸುಮಾರು 600 ಕ್ಕೂ ಹೆಚ್ಚು ಮನೆಗಳು ಹಾಗೂ 2500 ಕ್ಕೂ ಅಧಿಕ ಜನಸಂಖ್ಯೆ ಇತ್ತು.
ಆ ಗ್ರಾಮದಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡುತ್ತಾರೆ ಎಂಬ ಕಾರಣದಿಂದ ತಾತ್ಕಾಲಿಕವಾಗಿ ರಸ್ತೆ ಕಾಮಕಾರಿಯನ್ನು ಮಾಡಲಾಗಿತ್ತು. ಆದರೆ, ಇದೀಗ 12 ವರ್ಷಗಳೇ ಕಡೆಳೆದಿವೆ. ಆದರೂ ಕೂಡ ಇನ್ನೂ ಆ ಗ್ರಾಮಕ್ಕೆ ಸಮರ್ಪಕ ರಸ್ತೆಯಾಗಿಲ್ಲ. ಆರು ಕಿಲೋ ಮೀಟರ್ ವ್ಯಾಪ್ತಿಯ ಈ ರಸ್ತೆ ಮೊನ್ನೆ ಕೇವಲ ಒಂದೇ ಕಿಲೋಮೀಟರ್‌ನಷ್ಟು ಡಾಂಬರ್ ಹಾಕಲಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆಯ ಸೌಲಭ್ಯ ಕಲ್ಪಿಸಿಕೊಡುವಂತೆ ಗ್ರಾಮಸ್ಥರೆಲ್ಲರೂ ಕೋರಿದ್ದರು. ಆ ಬೇಡಿಕೆ ಮಾತ್ರ ಈಡೇರಿವೆಯಾದ್ರೂ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಿಲ್ಲ.
ಕೋಟ್ಯಂತರ ರೂಪಾಯಿ ವ್ಯಯಿಸಿ ಕುಡಿಯುವ ನೀರಿನ ಕೆರೆಯನ್ನ ನಿರ್ಮಿಸಲಾಗಿದೆ. ಈವರೆಗೂ ಆ ಕೆರೆಯ ಭರ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೊರಾರ್ಜಿ ದೇಸಾಯಿ ಶಾಲೆಯೊಂದನ್ನು ಮಾತ್ರ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ನಿರ್ಮಿಸಿದ್ಧು, ಬಿಟ್ಟರೆ ಬೇರೆ ಯಾವ ಕೆಲಸವೂ ನಡೆದಿಲ್ಲ.
2011-12ನೇ ಸಾಲಿನ ಕುಡಿಯುವ ನೀರಿನ ಕೆರೆ ಹಾಗೂ ಬೃಹತ್ ಟ್ಯಾಂಕ್‌ನ ನಿರ್ಮಿಸಲಾಗಿದೆ. ಆದರೆ, ಕೆರೆಯೊಳಗೆ ಕಲ್ಲು ಬಂಡೆಗಳೇ ಹೆಚ್ಚಾಗಿ ತುಂಬಿಕೊಂಡಿದ್ದು, ಈ ಕೆರೆಯ ನಿರ್ಮಾಣ ಅವೈಜ್ಞಾನಿಕವಾಗಿದೆ. ಬಳಕೆಗೆ ಯೋಗ್ಯವಲ್ಲದ ಕೆರೆಯನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹಾಗೂ ಹಾಲಿ ಶಾಸಕ ಬಿ.ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಶಂಕುಸ್ಥಾಪನೆ ಮಾಡಿದ್ರಂತೆ.