ಬಳ್ಳಾರಿ: ಪೊಲೀಸರ ತ್ಯಾಗ, ಸೇವಾ ಮನೋಭಾವ ಶ್ರೇಷ್ಠವಾದುದು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳೆನ್ನದೆ ಜನ ಸೇವೆ ಮಾಡಿದ್ದಾರೆ. ಇಂತಹ ತ್ಯಾಗ ಮನೋಭಾವ, ಸೇವೆ ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೃಷ್ಣ ಬಿ.ಅಸೋಡೆ ಕೊಂಡಾಡಿದರು.
ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಡಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರಿಗೆ ಪುಷ್ಪಗುಚ್ಛ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಸಿಬ್ಬಂದಿ ಸಮಯದ ನಿಗದಿ ಇಲ್ಲದಂತೆ ಕೆಲಸ ಮಾಡುತ್ತಾರೆ. ಪೊಲೀಸರೂ ಕೂಡ ನ್ಯಾಯಾಧೀಶರೇ. ಜನರು ತಮಗೆ ಸಮಸ್ಯೆಯಾದರೆ ಮೊದಲು ಪೊಲೀಸರನ್ನೇ ನೆನಪಿಸಿಕೊಂಡು ಅವರ ಹತ್ತಿರ ಬರುತ್ತಾರೆ. ಜನಸಾಮಾನ್ಯರ ಆಸ್ತಿಪಾಸ್ತಿ ಸುಭದ್ರವಾಗಿರಲು ಕಾರಣ ಪೊಲೀಸರು ಎಂದರು.
ಕುಖ್ಯಾತರನ್ನು ಬಂಧಿಸುವ ವೇಳೆ ಬಹಳಷ್ಟು ಬಾರಿ ಪೊಲೀಸರು ಪ್ರಾಣ ಕಳೆದುಕೊಂಡ ಪ್ರಸಂಗಗಳು ನಡೆದಿವೆ ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು, ಪೊಲೀಸರ ತ್ಯಾಗ ಮತ್ತು ಬಲಿದಾನಗಳು ಎಂದಿಗೂ ವ್ಯರ್ಥವಾಗಬಾರದು. ಹುತಾತ್ಮರಿಗೆ ಸರ್ಕಾರ ಸರಿಯಾದ ಪರಿಹಾರ ನೀಡಿ, ಅವರ ಕುಟುಂಬಕ್ಕೆ ನೆರವಾಗಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಮಾತನಾಡಿ, ಭಾರತದಲ್ಲಿ ಈ ವರ್ಷ 264 ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಯೇ ಮರಣ ಹೊಂದಿದ್ದು, ಅದರಲ್ಲಿ ಕರ್ನಾಟಕದ 17 ಮಂದಿ ಇದ್ದಾರೆ. ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಾ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅನೇಕರು ಕರ್ತವ್ಯದ ಸಂದರ್ಭದಲ್ಲಿಯೇ ಸೋಂಕು ತಗುಲಿ ಮರಣ ಹೊಂದಿದ್ದಾರೆ. ಬಳ್ಳಾರಿಯಲ್ಲಿಯೂ ಸಹ 9 ಜನ ಪೊಲೀಸ್ ಸಿಬ್ಬಂದಿ ಮರಣ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳು, ಸಿಪಿಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.