ವಿಜಯನಗರ : ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದ್ದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಪಟ್ಟಣದ ಹಳೆ ಊರಿನ ನೀರಾವರಿ ಇಲಾಖೆಯ ಆವರಣದಲ್ಲಿ ಆಟ ಆಡುತ್ತಿದ್ದ ಅದ್ವಿಕ್ (5)ನನ್ನು ಭಾನುವಾರ ಸಂಜೆ ದುಷ್ಕರ್ಮಿಗಳು ಅಪಹರಿಸಿದ್ದರು.
ಬಳಿಕ ದುಷ್ಕರ್ಮಿಗಳು,ಬಾಲಕನ ತಂದೆ ರಾಘವೇಂದ್ರ ಅವರಿಗೆ ಕರೆ ಮಾಡಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಡಿವೈಎಸ್‌ಪಿ ಹರೀಶ್, ಸಿಪಿಐ ಟಿ.ಮಂಜಣ್ಣ, ಪಿಎಸ್‌ಐ ಪಿ.ಸರಳಾ ಹಾಗೂ ಹಲವು ಪೊಲೀಸ್ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬಾಲಕನನ್ನು ರಕ್ಷಿಸಲಾಗಿದೆ.
ವೇಷ ಮರೆಸಿಕೊಂಡು ಪೊಲೀಸರ ಕಾರ್ಯಾಚರಣೆ : ಅಪಹರಣಕ್ಕೊಳಗಾಗಿದ್ದ ಬಾಲಕನ ಸುರಕ್ಷಿತ ಬಿಡುಗಡೆಗೆ ಪೊಲೀಸರು ಯೋಜನೆಯನ್ನು ರೂಪಿಸಿದ್ದರು. ಅಪಹರಣಕಾರರು ಮೋರಿಗೇರಿ ಕ್ರಾಸ್‌ನ ಉಲವತ್ತಿ ಗ್ರಾಮದ ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಹಣಕ್ಕಾಗಿ ಅಡಗಿ ಕುಳಿತಿದ್ದರು. ಈ ವೇಳೆ ಬಾಲಕನ ತಂದೆ ರಾಘವೇಂದ್ರ ಅವರು ತಮ್ಮ ಪತ್ನಿಯೊಂದಿಗೆ ಹಣದ ಸಮೇತ ದುಷ್ಕರ್ಮಿಗಳ ಬಳಿಗೆ ತೆರಳಿದ್ದರು.
ಅವರೊಂದಿಗೆ ಪೊಲೀಸರು ಗ್ರಾಮೀಣರಂತೆ ವೇಷ ಮರೆಸಿಕೊಂಡು ಹಿಂಬಾಲಿಸಿ, ಸುತ್ತುವರೆದಿದ್ದರು. ಜೊತೆಗೆ ಇಬ್ಬರು ಪೊಲೀಸರು, ಕುಡುಕರಂತೆ ನಟಿಸುತ್ತಾ ಅಪಹರಣಕಾರರ ಬಳಿ ತೆರಳುತ್ತಿದ್ದಂತೆ ಅಪಹರಣಕಾರರು ಬಾಲಕನನ್ನು ಮತ್ತು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಅಪಹರಣಕಾರರ ದೂರವಾಣಿ ಕರೆಯ (ಸಿಡಿಆರ್) ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು, ಅಪಹರಣಕಾರರನ್ನು ಶೀಘ್ರವೇ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ಗೆಳತಿಯೊಂದಿಗೆ ಲಾಡ್ಜ್‌ಗೆ ಹೋಗಿದ್ದ ಯುವಕ ಇದ್ದಕ್ಕಿದ್ದಂತೆ ಸಾವು: ಶಕ್ತಿ ಹೆಚ್ಚಿಸುವ ಮಾತ್ರೆ ಸೇವಿಸಿರುವ ಶಂಕೆ