ಬಳ್ಳಾರಿ: ಗಣಿನಾಡಿನಲ್ಲಿ ಹೆಲ್ಮೆಟ್ ಧರಿಸುವ ವಿಚಾರದಲ್ಲಿ ವಿನಾಯಿತಿ ಕೊಡಲಾಗಿದೆ. ಆದರೆ, ಜಿಲ್ಲಾ ಪೊಲೀಸ್ ಇಲಾಖೆಯ ಹೆಲ್ಮೆಟ್ ಕಡ್ಡಾಯಗೊಳಿಸಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ನಾಲ್ಕಾರು ತಿಂಗಳಿಂದಲೂ ಜಿಲ್ಲೆಯ ನಾನಾ ತಾಲೂಕು ಹಾಗೂ ಹೋಬಳಿಯ ಪ್ರಮುಖ ರಸ್ತೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ದಂಡ ವಸೂಲಿ ಮಾಡುತ್ತಿದೆ. ಬೈಕ್, ಕಾರು ಮತ್ತು ಬಾರಿ ವಾಹನ ಸೇರಿದಂತೆ ಸರಕು ಸಾಗಣೆ ವಾಹನಗಳ ಸವಾರರನ್ನು ತಡೆದು ಮನಸೋ ಇಚ್ಛೆ ದಂಡ ವಸೂಲಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಬಾಂಬೆಗೆ ಓಡಿ ಹೋದಾಗ ಬಿ.ಸಿ.ಪಾಟೀಲ್ಗೆ ಹೇಡಿ ಅಂತ ಅನ್ನಿಸಿರಲಿಲ್ಲವೇ?: ತಂಗಡಗಿ
ಕೋವಿಡ್ ಸಂಕಷ್ಟದಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮಾಡಲು ಕೆಲಸ ಇಲ್ಲದೇ ಜೀವನ ಸಾಗಿಸಲೂ ಕೂಡ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿನಾಯಿತಿ ಇದ್ದರೂ ದಂಡ ಶುಲ್ಕ ಯಾಕೆ ವಸೂಲಿ:
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಈ ಹೆಲ್ಮೆಟ್ ಧಾರಣೆಯಲ್ಲಿ ವಿನಾಯಿತಿ ಇದೆ. ಆದರೂ ದಂಡ ವಸೂಲಿ ಮಾಡಲಾಗುತ್ತಿದೆ. ಎಲ್ಲ ದಾಖಲಾತಿಗಳನ್ನು ನೀಡಿದರೂ ಕೂಡ ಹೆಲ್ಮೆಟ್ ಧಾರಣೆ ಮಾಡಿಲ್ಲ ಎಂದು 500 ರೂ.ಗಳಷ್ಟು ದಂಡ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸಾರ್ಜಜನಿಕರು ಬೇಸತ್ತಿದ್ದಾರೆ.
ಕೊಂಡಯ್ಯ ಮೌನವಹಿಸಿದ್ದು ಯಾಕೆ?:
ಪ್ರತಿ ಬಾರಿಯೂ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರು ಹೆಲ್ಮೆಟ್ ಧಾರಣೆಯ ವಿನಾಯಿತಿ ನೀಡಿರುವ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದು ಕಡ್ಡಾಯ ಹೆಲ್ಮೆಟ್ ಧಾರಣೆಯನ್ನು ತಪ್ಪಿಸುತ್ತಿದ್ದರು. ಆದರೀಗ ಯಾಕೆ ಮೌನವಹಿಸಿದ್ದಾರೆ ಎಂಬುದು ತಿಳಿಯದಂತಾಗಿದೆ.