ಬಳ್ಳಾರಿ: ಜನವರಿ 26ರಂದು 72ನೇಯ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ದೆಹಲಿಯಲ್ಲಿ ನಡೆಯಲಿರುವ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧ ಚಿತ್ರದ ಮೆರವಣಿಗೆ ನಡೆಯಲಿದೆ.
ವಿಜಯನಗರ ಸಾಮ್ರಾಜ್ಯದ ಅರಸನಾಗಿದ್ದ ಶ್ರೀಕೃಷ್ಣದೇವರಾಯನ ಮೂರ್ತಿಯನ್ನ ಪ್ರತಿಷ್ಠಾಪಿಸಲಾದ ಸಾರೋಟಿನಲ್ಲಿ ಉಗ್ರ ನರಸಿಂಹ ಹಾಗೂ ಕನಕದುರ್ಗಮ್ಮ ಮೂರ್ತಿಯು ಈ ಬಾರಿ ಕೆಂಪು ಕೋಟೆಯಲ್ಲಿ ಸದ್ದು ಮಾಡಲಿದೆ. ವಿಶ್ವಸಂಸ್ಥೆಯ(ಯುನೆಸ್ಕೋ) ವತಿಯಿಂದ ವಿಶ್ವ ಪರಂಪರೆಯ ಸ್ಥಳ ಎಂದು ಹಂಪಿ ಗುರುತಿಸಲ್ಪಟ್ಟಿದೆ.
ಐರೋಪ್ಯ ಹಾಗೂ ಪರ್ಷಿಯಾ ಪ್ರವಾಸಿಗರ ಕಥನಗಳು ಹಾಗೂ ಪುರಾತತ್ವ ಉತ್ಖನನಗಳು ವಿಜಯನಗರ ಸಾಮ್ರಾಜ್ಯದ ಶಕ್ತಿ ಮತ್ತು ಶ್ರೀಮಂತಿಕೆಯನ್ನು ಬಹಿರಂಗಪಡಿಸುತ್ತವೆ. 1500 ನೇ ಇಸವಿಯಲ್ಲಿ ಬೀಜಿಂಗ್‌ನ ನಂತರ ವಿಶ್ವದ ಅತೀ ದೊಡ್ಡ ಹಾಗೂ ಭಾರತದ ಅತ್ಯಂತ ಸಿರಿವಂತ ಮಧ್ಯ ಕಾಲೀನ ಯುಗದ ನಗರಿಯಾಗಿತ್ತು.
ಹಂಪಿಯ ಕೇಂದ್ರ ಬಿಂದು ಎನಿಸಿರುವ ಉಗ್ರ ನರಸಿಂಹ, ಭಗವಾನ್ ಹನುಮನ ಜನ್ಮಸ್ಥಳ ಎಂದು ಹೇಳಲಾದ ಅಂಜನಾದ್ರಿ ಬೆಟ್ಟ, ವಿಜಯನಗರ ಸಾಮ್ರಾಜ್ಯದ ಸರ್ವಶ್ರೇಷ್ಠ ಸಾಮ್ರಾಟ ಶ್ರೀ ಕೃಷ್ಣದೇವರಾಯರ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿ ಚಿತ್ರಗಳನ್ನ ಈ ಸ್ತಬ್ದಚಿತ್ರವು ಬಿಂಬಿಸುತ್ತವೆ.