ಬಳ್ಳಾರಿ: ಕಲುಷಿತ ನೀರು ಸೇವಿಸಿ 18 ಜನರು ಅಸ್ವಸ್ಥಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಕುಂಟನಾಳ ಗ್ರಾಮದಲ್ಲಿ ನಡೆದಿದೆ. ಜನರು ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದು, ಗ್ರಾಮದ ವಾಲ್ಮೀಕಿ ಭವನದಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ಪ್ರಾರಂಭಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಅವರು ಗ್ರಾಮದ ಹೊರ ವಲಯದಲ್ಲಿ ಹರಿಯುತ್ತಿರುವ ವೇದವತಿ ನದಿ ನೀರನ್ನು ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿ ಕೆಲಸ ನಡೆಯುತ್ತಿದೆ. ಗ್ರಾಮದ ಕೆಲ ಭಾಗದಲ್ಲಿ ಪೈಪ್ ಲೈನ್ ಒಡೆದು ಚರಂಡಿ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗುತ್ತಿದ್ದು, ಇದನ್ನು ಸೇವಿಸಿದ ಐದು ಕುಟುಂಬಗಳ 18 ಜನರಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.
ಘಟನೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿದ್ದ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಕೈಕೊಟ್ಟಿದೆ. ಗ್ರಾಮಸ್ಥರಿಗೆ ವೇದಾವತಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ಇದರೊಂದಿಗೆ ಒಡೆದ ಪೈಪ್ ಲೈನ್ ಮೂಲಕ ಒಳಚರಂಡಿ ನೀರು ಕಲುಷಿತಗೊಂಡು ನೀರು ಸರಬರಾಜು ಆಗಿದೆ. ಕುಂಟನಾಳ ಗ್ರಾಮಸ್ಥರು ಇದೇ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ: "ಗ್ರಾಮಸ್ಥರು ಹೆಚ್ಚು ರೈತಾಪಿ ಜನರಿದ್ದು, ಜಮೀನುಗಳ ಹತ್ತಿರದ ಕಲುಷಿತ ನದಿ ನೀರನ್ನು ಕುಡಿದಿದ್ದರಿಂದ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಕುಂಟನಾಳ ಗ್ರಾಮದಲ್ಲಿ 18 ಜನರು ಚಿಕಿತ್ಸೆ ಪಡೆದಿದ್ದು, ಇದರಲ್ಲಿ 10 ಜನ ಚೇತರಿಸಿಕೊಂಡಿದ್ದಾರೆ. ಉಳಿದ 8 ಜನರಲ್ಲಿ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಸರ್ವೇ ಕೈಗೊಂಡಿದ್ದು, ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ರೂಪನಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ವೀರರೆಡ್ಡಿ ತಿಳಿಸಿದರು.
ವಾಂತಿ-ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ತಂಡವೊಂದು ಕುಂಟನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ವಾಂತಿ-ಬೇಧಿಗೆ ಗುರಿಯಾದವರನ್ನು ಪರೀಕ್ಷಿಸಿದ್ದಾರೆ. ಗ್ರಾಮಕ್ಕೆ ಪೂರೈಕೆ ಮಾಡುತ್ತಿರುವ ನೀರಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಶುಚಿತ್ವಕ್ಕಾಗಿ ಜನರಿಗೆ ಜಾಗೃತಿ ಮೂಡಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಒಟ್ಟು 26 ಆಶಾ ಕಾರ್ಯಕರ್ತರು ಜತೆಗೆ ಸೇರಿಕೊಂಡು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ವೈದ್ಯರ ತಂಡ ಸರ್ವೇ ಮಾಡುತ್ತಿದೆ. ಈಗಾಗಲೇ ಕಲುಷಿತ ನೀರು ಸೇವಿಸಿದ ಐದು ಕುಟುಂಬಗಳ 18 ಜನರಿಗೆ ಚಿಕಿತ್ಸೆ ನೀಡಿ, ಅವರ ಮನೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕಲುಷಿತ ನೀರು ಸೇವಿಸಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಗುಣವಾಗಿರುವವರಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಕಾಳಜಿ ವಹಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ತುರ್ತು ಸಂದರ್ಭಕ್ಕಾಗಿ ಒಂದು ಆ್ಯಂಬುಲೆನ್ಸ್ ಇರಿಸಲಾಗಿದೆ.
ಇದನ್ನೂ ಓದಿ: ಕಲುಷಿತ ನೀರು ಸೇವನೆ: ಇಬ್ಬರು ಮೃತ, 34ಕ್ಕೂ ಹೆಚ್ಚು ಜನರು ಅಸ್ವಸ್ಥ