ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗಾಗಿ ಜಿಲ್ಲಾ ಖಜಾನೆ ಉಪ ನಿರ್ದೇಶಕ ನೇತೃತ್ವದಲ್ಲಿ ಇಂದು ಕುಂದು ಕೊರತೆಗಳ ಸಭೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಬಳ್ಳಾರಿ ಸಭಾ ಭವನದಲ್ಲಿ ಇಂದು ಪಿಂಚಣಿ ಅದಾಲತ್ ಕುಂದು ಕೊರತೆಗಳ ಕಾರ್ಯಕ್ರಮಕ್ಕೆ ಜಿಲ್ಲಾ ಖಜಾನೆ ಉಪನಿರ್ದೇಶಕ ಜಿ.ಸುರೇಶ್ ಅವರು ಚಾಲನೆ ನೀಡಿದರು.
ಸಭೆಯಲ್ಲಿ ಪಿಂಚಣಿ ಅದಾಲತ್ ನೀಡುವ 4 ಬ್ಯಾಂಕ್ಗಳಲ್ಲಿ, ಒಬ್ಬರೇ ಬ್ಯಾಂಕ್ನ ಅಧಿಕಾರಿ ಬಂದರೆ ನಮ್ಮ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ ಎಂದು ನಿವೃತ್ತ ನೌಕರರು ಉಪ ನಿರ್ದೇಶಕರಿಗೆ ಪ್ರಶ್ನೆ ಮಾಡಿದರು.
ಜಿಲ್ಲಾ ಖಜಾನೆ ಉಪನಿರ್ದೇಶಕ ಜಿ.ಸುರೇಶ್ ಮಾತನಾಡಿ ನಿವೃತ್ತ ನೌಕರರ ಪಿಂಚಣಿ 13 ಬ್ಯಾಂಕ್ ಗಳ ಮೂಲಕ ಬರುತ್ತಿತ್ತು. ಖಜಾನೆಗೆ ಬಂದ ನಂತರ 5 ಬ್ಯಾಂಕ್ ಗಳಲ್ಲಿ ಪಿಂಚಣಿ ನೀಡುವ ವ್ಯವಸ್ಥೆಯಿದ್ದು, ಅದು ಈಗ ನಾಲ್ಕು ಬ್ಯಾಂಕ್ಗೆ ಸೇರಿದೆ ಎಂದರು.
ಬ್ಯಾಂಕ್ಗಳಲ್ಲಿ ನಿವೃತ್ತ ನೌಕರ ದಾಖಲಾತಿಗಳು ಕಾಣೆ: ಹಳೆ ಬ್ಯಾಂಕ್ಗಳ ಮೂಲಕ ಈ ಐದು ಬ್ಯಾಂಕ್ಗಳಿಗೆ ನಿವೃತ್ತ ಹೊಂದಿದ ನೌಕರರ ದಾಖಲಾತಿಗಳನ್ನು ತರಿಸಿಕೊಂಡು ಪಿಂಚಣಿ ಕೊಡುವವರೆಗೂ ನಮ್ಮ ಜವಾಬ್ದಾರಿ. ಕೆಲ ಬ್ಯಾಂಕ್ಗಳಲ್ಲಿ ದಾಖಲಾತಿಗಳು ಕಳೆದು ಹೋಗಿವೆ. ಇದರಿಂದಾಗಿ ಮತ್ತೆ ದಾಖಲೆಗಳನ್ನು ಪಡೆದು ಬ್ಯಾಂಕ್ಗಳಿಗೆ ಸಲ್ಲಿಸಿ ಪಿಂಚಣಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಪಂಚಪ್ಪ ಮಾತನಾಡಿ ಪಿಂಚಣಿ ಡಿ 18ಕ್ಕೆ 23,090 ರೂಪಾಯಿ ಮೂಲ ವೇತನ ಇತ್ತು. 2019 ಜನವರಿಯಿಂದ ಬ್ಯಾಂಕ್ಗಳಲ್ಲಿ ಕಡಿಮೆ ಮಾಡಿಕೊಂಡು ಬಂದಿದ್ದಾರೆ. ಹರಪನಹಳ್ಳಿ ತಾಲೂಕಿನ ಸಿಂಡಿಕೇಟ್ ಬ್ಯಾಂಕ್ನಲ್ಲಿ ಸರಿಯಾಗಿತ್ತು. ನಂತರ ಮಣಿಪಾಲ್ ಬ್ಯಾಂಕ್ ಹೋದಾಗಿನಿಂದ ಕಡಿಮೆ ಆಗಿದೆ. ತದ ನಂತರ ಕೆನರಾ ಬ್ಯಾಂಕ್ ಆದ ಮೇಲೆ ಪ್ರತಿ ತಿಂಗಳ ಒಂದು ಸಾವಿರ ರೂ. ಕಡಿಮೆ ಬರುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಖಜಾನೆ ಉಪನಿರ್ದೇಶಕ ಜಿ.ಸುರೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಟಿ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನೀಲಪ್ಪ, ಬ್ಯಾಂಕ್ ಆಫ್ ಬರೋಡ ಪ್ರತಿನಿಧಿ ಮಹೇಶ್ ಮತ್ತು ಜಿಲ್ಲೆಯ ವಿವಿಧ ತಾಲೂಕಿನಿಂದ ನಿವೃತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.