ಹೊಸಪೇಟೆ (ವಿಜಯನಗರ): ಜಿಲ್ಲೆಯ ಹೂವಿನಹಡಗಲಿಯ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 6 ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಲೆದಂಡವಾಗಿದೆ. ಮಕರಬ್ಬಿ ಗ್ರಾಮ ಪಂಚಾಯಿತಿಯ ಪಿಡಿಓ ಶರಣಪ್ಪ, ಹಡಗಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಿರಿಯ ಇಂಜಿನಿಯರ್ ಜಿ.ವಿಜಯಾನಾಯ್ಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಡಿ. ಕುಮಾರ್ ಮತ್ತೋರ್ವ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಘಟನೆಗೆ ಕಾರಣ ಹುಡುಕಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 3 ತಂಡಗಳ ರಚನೆ ಮಾಡಲಾಗಿದೆ.
ಇದರ ಜೊತೆ ಡಿಹೆಚ್‍ಒ ಡಾ.ಜನಾರ್ಧನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಹಡಗಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿನೋದ್ ಅವರಿಗೆ ತಮ್ಮ ಮೇಲೆ ಶಿಸ್ತುಕ್ರಮ ಏಕೆ ಜರುಗಿಸಬಾರದು ಎಂದು ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಪಿಡಿಓ ಅಮಾನತಿಗೆ ಆಕ್ರೋಶ
ಪಿಡಿಓ ಶರಣಪ್ಪ ಅವರನ್ನು ಅಮಾನತು ಮಾಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಮಕರಬ್ಬಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಶರಣಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಇದರಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಿದೆ. ಅವರ ಮೇಲೆ ಕ್ರಮ ಜರುಗಿಸಲಿ, ಈ ಕೂಡಲೇ ಶರಣಪ್ಪ ಅವರ ಅಮಾನತು ಆದೇಶ ಹಿಂಪಡೆಯಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಕರಬ್ಬಿ ದುರಂತ: ಮತ್ತೊಬ್ಬನ ಸ್ಥಿತಿ ಗಂಭೀರ.. ಈಟಿವಿ ಭಾರತ ಗ್ರೌಂಡ್ ರಿಪೋರ್ಟ್