ಬಳ್ಳಾರಿ: ಸಿರುಗುಪ್ಪ, ಕುರುಗೋಡು ಹಾಗೂ ಬಳ್ಳಾರಿ ತಾಲೂಕಿನಲ್ಲಿ ಸೋನಾಮಸೂರಿ ಭತ್ತದ ಬೆಳೆಯನ್ನ ಅತ್ಯಂತ ಹೇರಳವಾಗಿ ಬೆಳೆಯಲಾಗುತ್ತದೆ. ಈ ಭತ್ತದ ಬೆಳೆ ಮಾತ್ರ ರೈತರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡಿರುವ ಉದಾಹರಣೆ ಇಲ್ಲ.
ಆದರೆ, ಕಳೆದ 2-3 ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದ ಸೋನಾಮಸೂರಿ ಬೆಳೆಗೆ ಊದಿನ ಕಡ್ಡಿ ಹಾಗೂ ಕೆಂಪು ರೋಗ ಅಂಟಿದೆ. ಇದರಿಂದ ಉತ್ತಮ ಫಸಲು ಬರೋ ಹಂತದಲ್ಲೇ ಬೆಳೆಯು ಸಂಪೂರ್ಣ ನೆಲಕಚ್ಚಿದೆ. ಈ ಹಿಂದೆ ಎಕರೆಗೆ 35 ರಿಂದ 45 ಚೀಲದವರೆಗೆ ಭತ್ತ ಬೆಳೆಯಲಾಗುತ್ತಿತ್ತು.
ಆದರೀಗ ಕೇವಲ 10-15 ಚೀಲದವರೆಗೆ ಮಾತ್ರ ಭತ್ತ ಬೆಳೆಯಲಾಗಿದೆ. ಇದರಿಂದ ಉಳುಮೆ ಮಾಡಿದ ಖರ್ಚು ಕೂಡ ವಾಪಸ್ ಬಾರದ ರೀತಿಯಲ್ಲಿದೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ರೈತ ಶ್ರೀನಿವಾಸ ಅವರು, ಈ ಜಿಲ್ಲೆಯಲ್ಲಿ ಕನಿಷ್ಠ ಮೂರು ಲಕ್ಷಕ್ಕೂ ಅಧಿಕ ಹೆಕ್ಟೇರ್ನಷ್ಟು ಭತ್ತದ ಬೆಳೆ ಬೆಳೆಯಲಾಗಿದೆ.
ಮಹಾಮಳೆಯಿಂದಾಗಿ ಉತ್ತಮ ಫಸಲು ಬಾರದೇ ಕೇವಲ ಎಕರೆಗೆ 10 ರಿಂದ 15 ಚೀಲದವರೆಗೆ ಮಾತ್ರ ಸೋನಾಮಸೂರಿ ಭತ್ತ ಬೆಳೆಯಲಾಗಿದೆ. ಇದರಿಂದ ಉಳುಮೆ ಮಾಡಲು ಖರ್ಚಾದ ಹಣವೂ ಕೂಡ ವಾಪಸ್ ಬರೋದು ಕಷ್ಟ. ಈ ಹಿಂದೆ ರೂ. 1800ರವರೆಗೆ ಕ್ವಿಂಟಾಲ್ ಭತ್ತ ಖರೀದಿಸಲಾಗುತ್ತಿತ್ತು.
ಆದರೀಗ ₹900 - ₹1100ರವರೆಗೆ ಮಾತ್ರ ಕ್ವಿಂಟಾಲ್ ಭತ್ತವನ್ನ ಖರೀದಿಸಲಾಗುತ್ತೆ. ಹೀಗಾದ್ರೆ ಭತ್ತ ಬೆಳೆದ ರೈತರ ಪರಿಸ್ಥಿತಿಯಂತೂ ಅಧೋಗತಿಯತ್ತ ಸಾಗುತ್ತದೆ. ಈವರೆಗೂ ಕೂಡ ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರವನ್ನೂ ಕೂಡ ತೆರೆದಿಲ್ಲ. ಭತ್ತದ ಬೆಳೆನಷ್ಟದ ಕುರಿತು ಸರ್ವೇಕಾರ್ಯಕ್ಕೂ ಜಿಲ್ಲಾಡಳಿತ ಮುಂದಾಗಿಲ್ಲ ಎಂದು ರೈತ ಶ್ರೀನಿವಾಸ ದೂರಿದ್ದಾರೆ.