ಬಳ್ಳಾರಿ: ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಐಎಂಎಸ್‍ಎಸ್ ಮತ್ತು ಎಐಡಿಎಸ್‍ಒ ಸಂಘಟನೆಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನೆ ನಡೆದಿದೆ.
ನೂರಾರು ಸಂಖ್ಯೆಯಲ್ಲಿ ಬಡಾವಣೆಯ ಜನರು-ಮಹಿಳೆಯರು ಸಾಮಾಜಿಕ ಜಾಲತಾಣಗಳ ಮೂಲಕ ಬಳ್ಳಾರಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಿವಿಧ ಬಡಾವಣೆಯ ಜನರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದರು.
ಎಐಡಿಎಸ್‍ಒನ ಅಖಿಲ ಭಾರತ ಉಪಾಧ್ಯಾಕ್ಷ ಡಾ. ಪ್ರಮೋದ್ ಮಾತನಾಡಿ, ಅತ್ಯಾಚಾರ ಮತ್ತು ಕೊಲೆ ಮಾಡಿದ ನಾಲ್ವರು ಯುವತಿಯ ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಕಾಲ ಜೀವದ ಜೊತೆ ಹೋರಾಡಿ ಉತ್ತರಪ್ರದೇಶದ ಹಥ್ರಾಸ್ನ ಯುವತಿ ದೆಹಲಿಯ ಸಫ್ದಾರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಳು. ಈ ಹೃದಯವಿದ್ರಾವಕ ಘಟನೆಯನ್ನು ಖಂಡಿಸಲು ಯಾವುದೇ ಪದಗಳು ಸಾಲುವುದಿಲ್ಲ. ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯ ಬಗ್ಗೆ ಇಂತಹ ಘಟನೆಗಳು ತೋರಿಸುತ್ತಿವೆ ಎಂದು ಹೇಳಿದರು.
ಎಐಎಂಎಸ್ಎಸ್ನ ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಈಶ್ವರಿ ಮಾತನಾಡಿ, ಹಲವಾರು ದೊಡ್ಡ ಭಾಷಣಗಳ ಹೊರತಾಗಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅದೇ ಬಿಜೆಪಿ ನೇತೃತ್ವದ ಯುಪಿ ಸರ್ಕಾರ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿ ಹೊಂದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.