ಬಳ್ಳಾರಿ : 'ಸಕಾಲ' ಅಧಿನಿಯಮದಡಿ ಸೇವೆಗಳನ್ನು ವಿಳಂಬ ಮಾಡುವ ಅಧಿಕಾರಿಗಳಿಗೆ ಈ ತಂತ್ರಾಂಶದ ಮುಖೇನವೇ ಆನ್‍ಲೈನ್‌ನಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆ ಅಡಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೇವೆ ವಿಳಂಬ ವಿಲೇವಾರಿ ಮಾಡಿದ್ದಕ್ಕೆ ನೀಡಲಾದ ಕಾರಣ ಕೇಳಿ ನೋಟಿಸ್ ಜಾರಿಯಾದ ಅಧಿಕಾರಿಯೂ ಕೂಡ ಆನ್‍ಲೈನ್ ಮುಖಾಂತರ ಸಕ್ಷಮ ಪ್ರಾಧಿಕಾರಕ್ಕೆ ಉತ್ತರ ಸಲ್ಲಿಸಬೇಕು ಎಂದು ಎಚ್ಚರಿಸಿದ್ರು.
ಸಕಾಲದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕಿದೆ. ನಿಗದಿಪಡಿಸಿದ ಅವಧಿಯೊಳಗೆ ಸೇವೆ ಒದಗಿಸದಿದ್ದಲ್ಲಿ ಸಮಸ್ಯೆಯಾಗುತ್ತದೆ. ಅದನ್ನು ಅಧಿಕಾರಿಯ ಎಚ್ಆರ್ಎಂಎಸ್ನೊಂದಿಗೆ ಅಟ್ಯಾಚ್ ಮಾಡಲಾಗುತ್ತಿದ್ದು, ಬಡ್ತಿ ಸಂದರ್ಭದಲ್ಲಿಯೂ ಅಡೆತಡೆ ಉಂಟಾಗುತ್ತದೆ ಎಂದರು.
ಇಡೀ ದೇಶದಲ್ಲಿಯೇ ಅತ್ಯಂತ ಮಾದರಿಯಾಗಿರುವ ಈ ಸೇವೆಯನ್ನು ಬಾಂಗ್ಲಾದೇಶ ಕೂಡ ಅಳವಡಿಸಿಕೊಂಡಿದೆ. ಆರಂಭದಲ್ಲಿ 278 ಸೇವೆಗಳಿದ್ದು, ಈಗ 1091 ಸೇವೆಗಳು ಈ ಸಕಾಲದಡಿ ಲಭ್ಯವಿವೆ. ಈ ಮುಂಚೆ ಮ್ಯಾನ್ಯುವಲ್ ಆಗಿದ್ದ ಸೇವೆಗಳು ಈಗ ಆನ್‍ಲೈನ್ (ಸೇವಾಸಿಂಧು) ಮೂಲಕ ಲಭ್ಯವಿವೆ ಎಂದು ತಿಳಿಸಿದ್ರು.
ಸಕಾಲ ನಾಮಫಲಕ ಎಲ್ಲಾ ಕಚೇರಿಗಳಲ್ಲೂ ಅಳವಡಿಸಿ:
ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳು ಸಕಾಲದಡಿ ಒದಗಿಸುತ್ತಿರುವ ಸೇವೆಗಳನ್ನು ನಾಮಫಲಕದಲ್ಲಿ ಬರೆದು ಮತ್ತು ಅದರೊಂದಿಗೆ ಸಹಾಯವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು ಎಂದು ತಹಸೀಲ್ದಾರ್ ವಿಶ್ವಜೀತ್ ಮೆಹತಾ ಸೂಚನೆ ನೀಡಿದರು.