ಬಳ್ಳಾರಿ : ನಾಳೆ (ಮಂಗಳವಾರ) ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ನಡೆಯಲಿದೆ. ಈ ಬಾರಿ ವಿಎಸ್ಕೆ ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ವಿಎಸ್ಕೆ ವಿವಿ ಉಪಕುಲಪತಿ ಸಿದ್ದು ಪಿ. ಅಲಗೂರು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾಳೆ ನಡೆಯುವ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ವಹಿಸಿಕೊಳ್ಳಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ಕುರುಕ್ಷೇತ್ರದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಕೈಲಾಶ್ ಚಂದ್ರ ಶರ್ಮಾ ಅವರು ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ ಅವರು ಭಾಗವಹಿಸಲಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟ, ಶಿಕ್ಷಣ, ಸಾಮಾಜಿಕ ಸೇವೆ ಪರಿಗಣಿಸಿ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾದ ಎನ್. ತಿಪ್ಪಣ್ಣ ಅವರಿಗೆ ಡಾಕ್ಟರೇಟ್ ನೀಡಲಾಗುತ್ತಿದೆ. ಹಿರೇಮಗಳೂರು ಕಣ್ಣನ್ ಅವರಿಗೆ ಕನ್ನಡ ಭಾಷಾ ಪ್ರಾವೀಣ್ಯತೆ, ದೂರದರ್ಶನ ಕಾರ್ಯಕ್ರಮಗಳ ನಿರೂಪಣೆಗಾಗಿ ಡಾಕ್ಟರೇಟ್ ನೀಡಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ನರೇಂದ್ರ ಕುಮಾರ್ ಬಲ್ಡೋಟ ಅವರಿಗೆ ಡಾಕ್ಟರೇಟ್ ಹಾಗೂ 42 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 26 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದರು.